ಮೈಸೂರು[ಆ.12]: ವಿಶ್ವ ಆನೆ ದಿನಾಚರಣೆ ಅಂಗವಾಗಿ ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಬಿಡುಗಡೆ ಮಾಡಿದರು.

ಈ ಅಂಚೆ ಲಕೋಟೆಯನ್ನು ಆನೆಯ ಲದ್ದಿಯಲ್ಲಿ ಸಿದ್ಧಪಡಿಸಲಾಗಿದೆ ಎನ್ನುವುದೇ ವಿಶೇಷ. ಬೇರೆ ಪ್ರಾಣಿಗೆ ಹೋಲಿಸಿದರೆ ಆನೆಯ ಲದ್ದಿಯಲ್ಲಿ ಹೆಚ್ಚಿನ ನಾರಿನ ಪ್ರಮಾಣ ಇರುತ್ತದೆ. ಹೀಗಾಗಿ ಆ ಲದ್ದಿಯಲ್ಲಿರುವ ನಾರನ್ನೇ ಬಳಸಿಕೊಂಡು ಈ ಲಕೋಟೆ ತಯಾರಿಸಲಾಗಿದೆ. ಅರಣ್ಯ ಇಲಾಖೆಯು ಅಂಚೆ ಇಲಾಖೆಯ ಸಹಯೋಗದಲ್ಲಿ ಸಿದ್ಧಪಡಿಸಿರುವ ಈ ಲಕೋಟೆಯ ಬೆಲೆ .25.

ಅಂಚೆ ಚೀಟಿ ಬಿಡುಗಡೆ ವೇಳೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌, ಸಂಸದ ಆರ್‌.ಧ್ರುವನಾರಾಯಣ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಯರಾಂ, ಪುನ್ನಾಟಿ ಶ್ರೀಧರ್‌, ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಅರಣ್ಯ ಅಧಿಕಾರಿಗಳಾದ ಸಿದ್ದರಾಮಪ್ಪ, ಹನುಂತಪ್ಪ ಮತ್ತಿತರರು ಇದ್ದರು.