ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿದರು. ಯೋಜನೆಯ ಯಶಸ್ಸು, ತಾಂತ್ರಿಕ ಲೋಪಗಳ ಸರಿಪಡಿಸುವಿಕೆ ಮತ್ತು ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕುರಿತು ಚರ್ಚಿಸಿದರು. ಹಣ ದುರುಪಯೋಗವಾಗದಂತೆ ಎಚ್ಚರಿಕೆ ನೀಡಿದರು.

ಬೆಂಗಳೂರು (ನ.6): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯ ಸೌಲಭ್ಯ ಪಡೆಯುತ್ತಿರುವ ಫಲಾನುಭವಿ ಮಹಿಳೆಯರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದ ಸಿಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ನೇರ ಸಂವಾದ ನಡೆಸಿದರು: ಈ ವೇಳೆ ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಿದ ಸಿಎಂ, ಗೃಹಲಕ್ಷ್ಮಿಯರ ಹಣ ದುರುಪಯೋಗವಾಗದಂತೆ ಹಾಗೂ ಅಕ್ರಮಗಳಿಗೆ ಬಲಿಯಾಗದಂತೆ ಮಹಿಳೆಯರಿಗೆ ಮನವಿ ಮಾಡಿದರು.

ರಾಜ್ಯದ ಪ್ರತಿ ಜಿಲ್ಲೆಯಿಂದ ತಲಾ 3 ಜನ ಆಯ್ಕೆಯಾದ ಗೃಹಲಕ್ಷ್ಮಿ ಫಲಾನುಭವಿಗಳನ್ನು ಸಿಎಂ ಗೃಹ ಕಚೇರಿಗೆ ಆಹ್ವಾನಿಸಲಾಗಿತ್ತು. ಫಲಾನುಭವಿಗಳ ನೇರ ಅನುಭವ, ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಯೋಜನೆಯ ಯಶಸ್ಸಿನ ಕುರಿತು ಮುಖ್ಯಮಂತ್ರಿಗಳು ಪ್ರತ್ಯಕ್ಷವಾಗಿ ಮಾಹಿತಿ ಪಡೆದರು.

ಯೋಜನೆಯ ಹುಟ್ಟಿನ ಕಥೆ ಹಂಚಿಕೊಂಡ ಸಿಎಂ

ಈ ಹಂತದಲ್ಲಿ ಯೋಜನೆ ಹುಟ್ಟಿದ ಕ್ಷಣವನ್ನು ಸಿಎಂ ನೆನಪಿಸಿಕೊಂಡರು. 'ರಾಜ್ಯದ ಜನ ನಮಗೆ 136 ಸೀಟುಗಳನ್ನು ಕೊಟ್ಟರು. ನಾವು 5 ಗ್ಯಾರಂಟಿಗಳನ್ನು ಘೋಷಿಸಿದಾಗ ವಿರೋಧ ಪಕ್ಷದವರು ನಮ್ಮನ್ನು ನೋಡಿ ನಕ್ಕರು, ಅತ್ತೆ-ಸೊಸೆ ನಡುವೆ ಜಗಳ ತಂದಿಡುತ್ತಿದ್ದೀರಾ ಎಂದರು. ಆದರೆ ನಾವು 1 ಕೋಟಿ 24 ಲಕ್ಷ ಮನೆ ಯಜಮಾನಿಯರಿಗೆ ಹಣ ತಲುಪಿಸಿದ್ದೇವೆ. ಚಾಮುಂಡೇಶ್ವರಿಯ ಬಳಿ ಹೋಗಿ ರಾಜ್ಯದ ಮಹಿಳೆಯರಿಗೆ ಶಕ್ತಿ ನೀಡುವಂತೆ ಬೇಡಿಕೊಂಡಿದ್ದೆ. ನನ್ನ ಸಂಬಂಧಿ ಹುಡುಗ ಪರಮೇಶ್ ಹಾಡಿದ 'ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ' ಎಂಬ ಹಾಡನ್ನು ಕೇಳಿ, ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಶಕ್ತಿ ನೀಡಲೇಬೇಕು ಎಂದು ತೀರ್ಮಾನಿಸಿ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನು ರೂಪಿಸಿದೆವು. ಸಿದ್ದರಾಮಯ್ಯನವರು ತಮ್ಮ ಬಾಲ್ಯದಲ್ಲಿ ಮನೆಯಲ್ಲಿ ಅಕ್ಕಿಯೇ ಇರಲಿಲ್ಲ ಎಂಬ ಸ್ಥಿತಿಯನ್ನು ನೆನಪಿಸಿಕೊಳ್ಳುತ್ತಿದ್ದರು. ಈ ಯೋಜನೆಗಳನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರೇ ಇದನ್ನು ಟೀಕಿಸಿ, ಬಳಿಕ ಅವರೂ ಇಂತಹ ಯೋಜನೆಗಳನ್ನು ಅನುಕರಿಸಿದರು' ಎಂದರು.

ಆರ್ಥಿಕ ಲೆಕ್ಕಾಚಾರ ಹಾಗೂ ತಾಂತ್ರಿಕ ಲೋಪ ಸರಿಪಡಿಸಲು ಕ್ರಮ

ಯೋಜನೆಯ ಹಣಕಾಸು ವಿವರ ಹಂಚಿಕೊಂಡ ಸಿಎಂ, ಇಲ್ಲಿಯವರೆಗೆ ಯೋಜನೆಯಡಿ 120 ಕೋಟಿ ವಹಿವಾಟು ಕ್ರಾಸ್ ಆಗಿದ್ದು, ಒಟ್ಟು ₹86,000 ಕೋಟಿ ರೂಪಾಯಿ ಬಜೆಟ್ ವೆಚ್ಚ ತಲುಪಿದೆ ಎಂದರು.ಕೆಲವು ಕಡೆ ಫೋನ್ ನಂಬರ್ ಒಬ್ಬರದ್ದಾಗಿದ್ದು, ಹಣ ಬೇರೆಯವರ ಖಾತೆಗೆ ಜಮೆಯಾಗುತ್ತಿರುವುದು ಹಾಗೂ ಸತ್ತವರ ಖಾತೆಗಳಿಗೂ ಹಣ ತಲುಪುತ್ತಿರುವ ತಾಂತ್ರಿಕ ಲೋಪಗಳು ಗಮನಕ್ಕೆ ಬಂದಿವೆ. ಕೆಲವರು ಬ್ಯಾಂಕ್ ಸಾಲ ಪಡೆದು, ಈ ಗೃಹಲಕ್ಷ್ಮಿ ಹಣ ನೇರವಾಗಿ ಆ ಸಾಲದ ಕಂತಿಗೆ ಜಮೆಯಾಗುವಂತೆ ಮಾಡಿಕೊಂಡಿದ್ದಾರೆ. ಇವೆಲ್ಲವನ್ನೂ ಸರಿಪಡಿಸಿ, ಯೋಜನೆಗೆ ಸಂಬಂಧಿಸಿದಂತೆ ನೂತನ ಅಪ್ಲಿಕೇಶನ್ ರೆಡಿ ಮಾಡಿಟ್ಟುಕೊಳ್ಳಲಾಗಿದ್ದು, ಮಹಿಳೆಯರ ಅಭಿಪ್ರಾಯ ಪಡೆದು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಕರೆಸಿ: ಮಹಿಳೆಯರ ಆಗ್ರಹಕ್ಕೆ ಸಿಎಂ ನಗೆ

ಸಂವಾದದ ವೇಳೆ ಮಹಿಳೆಯೊಬ್ಬರು, ಮೊದಲು ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ನಮ್ಮ ಜೊತೆ ಮಾತನಾಡಲು ಬರುತ್ತಿದ್ದರು, ಅವರಿಂದ ನಮಗೆ ಬಹಳ ನೆರವಾಗಿದೆ, ಅವರನ್ನು ಮತ್ತೆ ಕರೆಸಿ" ಎಂದು ಮನವಿ ಮಾಡಿದರು. ಈ ವೇಳೆ ಸದ್ಯಕ್ಕೆ ನಾನೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದೇನೆ ಎಂದ ಸಿಎಂ, ನಿಮ್ಮನ್ನು ನಾನು ಹೆಬ್ಬಾಳ್ಕರ್ ಅವರನ್ನು ಶಿಫಾರಸು ಮಾಡಿ ಎಂದು ಕರೆಸಿಲ್ಲ ಎಂದು ತಮಾಷೆಯಾಗಿ ನಕ್ಕರು. ಮುಂದುವರಿದು ಮಾತನಾಡಿದ ಅವರು, ಮುಂದಿನ ವಿಧಾನಸಭಾ ಅಧಿವೇಶನ ಪ್ರಾರಂಭವಾಗುವುದರೊಳಗೆ ಹೈಕಮಾಂಡ್ ಸೂಚನೆಯಂತೆ ಒಬ್ಬ ಮಹಿಳಾ ಶಾಸಕಿಯನ್ನು ಈ ಇಲಾಖೆಯ ನೂತನ ಸಚಿವೆಯನ್ನಾಗಿ ನೇಮಕ ಮಾಡಲಾಗುವುದು ಎಂದರು.

ಉಡುಪಿ-ಮಂಗಳೂರು ಬದಲಾವಣೆ & ಹಾರೂಡಿ ಮಹಿಳೆಯ ಪ್ರೀತಿಯ ಕೊಡುಗೆ:

ಉಡುಪಿ ಮತ್ತು ಮಂಗಳೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದಿದ್ದರೂ ಅಲ್ಲಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದಾರೆ. ಅಲ್ಲಿನ ವಾತಾವರಣ ಬದಲಾಗಿದೆಯೇ ಎಂದು ಸಿಎಂ ಉಡುಪಿಯ ಮಹಿಳೆಯನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಮಹಿಳೆ, ಎಲ್ಲಾ ಮಹಿಳೆಯರಿಗೂ ಯೋಜನೆ ನೆರವಾಗಿದೆ, ಜನರು ಬದಲಾಗುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಇಂತಹ ಬೃಹತ್ ಕಾರ್ಯಕ್ರಮ ಮಾಡಿದರೆ ಇನ್ನಷ್ಟು ಬದಲಾವಣೆ ಸಾಧ್ಯ ಎಂದರು.

ದೊಡ್ಡಬಳ್ಳಾಪುರದ ಹಾರೂಡಿಯಿಂದ ಬಂದಿದ್ದ ಪ್ರಭಾವತಿ ಎಂಬ ಫಲಾನುಭವಿ ಮಹಿಳೆ, ಪ್ರೀತಿಯಿಂದ ತಂದಿದ್ದ 'ಹುರುಳಿ ಕಾಳಿನ ಹಪ್ಪಳ'ವನ್ನು ಸಿಎಂಗೆ ಉಡುಗೊರೆಯಾಗಿ ನೀಡಿದರು. ಅದನ್ನು ಸ್ವೀಕರಿಸಿದ ಸಿಎಂ, ಅದನ್ನು ತಮ್ಮ ಮನೆಗೆ ತಲುಪಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಮತ್ತೊಬ್ಬ ಮಹಿಳೆ, ಗೃಹಲಕ್ಷ್ಮಿ ಹಣದಿಂದ ತಮ್ಮ ಮಗನನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿ ಓದಿಸುತ್ತಿರುವುದಾಗಿ ಸಂತಸ ಹಂಚಿಕೊಂಡರು.

ಮೀಟರ್ ಬಡ್ಡಿ, ಚಿಟ್ ಫಂಡ್ ಧಂದೆಗೆ ಬಲಿಬೀಳಬೇಡಿ

ಸಂವಾದದಲ್ಲಿ ಮಹಿಳೆಯರಿಗೆ ಕಟ್ಟುನಿಟ್ಟಿನ ಸಲಹೆ ನೀಡಿದ ಸಿಎಂ ಡಿಕೆ ಶಿವಕುಮಾರ್, ಕೆಲವು ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ಹೆಚ್ಚಿನ ಆಸೆಗೆ ಬಿದ್ದು ಮೀಟರ್ ಬಡ್ಡಿಗೆ ಕೊಟ್ಟು ಹಾಗೂ ಖಾಸಗಿ ಚಿಟ್ ಫಂಡ್‌ಗಳಿಗೆ ಹಾಕಿ ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಬಡ್ಡಿ ವ್ಯವಹಾರ ಅಥವಾ ಚಿಟ್ ಫಂಡ್ ಆಸೆಗೆ ಬಿದ್ದು ಹಣ ಕಳೆದುಕೊಳ್ಳಬೇಡಿ. ಗೃಹಲಕ್ಷ್ಮಿ ಮೆಸೇಜ್ ಬರುವ ನಿಮ್ಮ ಮೊಬೈಲ್ ಫೋನ್ ಅನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಗಂಡ ಅಥವಾ ಮಕ್ಕಳಿಗೆ ಕೊಡಬೇಡಿ. ಹೊರಗಿನವರೆಲ್ಲಾ ಬಂದು ಉಚಿತ ಬಸ್ ಪ್ರಯಾಣದ ದುರುಪಯೋಗ ಪಡೆಯುತ್ತಿರುವುದರಿಂದ, ಶೀಘ್ರದಲ್ಲೇ ಶಕ್ತಿ ಯೋಜನೆ ಅಡಿ ಅರ್ಹರಿಗೆ ಸ್ಮಾರ್ಟ್ ಕಾರ್ಡ್ (Smart Card) ವಿತರಿಸಲು ಯೋಜಿಸಲಾಗಿದೆ. ಎಲ್ಲರೂ ಕಾರ್ಡ್ ಪಡೆಯಬೇಕು ಎಂದರು

ಕೊನೆಯಲ್ಲಿ ಈ ಯೋಜನೆಯ ಸೌಲಭ್ಯ ಪಡೆದ ನೀವು 2028 ರಲ್ಲಿ ಮತ್ತೆ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಶಿವಕುಮಾರ್ ಅಣ್ಣನ ಋಣ ತೀರಿಸಬೇಕು ಎಂದು ಮಹಿಳೆಯರಲ್ಲಿ ಮನವಿ ಮಾಡಿದರು.