ಬೀದರ್‌(ಫೆ.07): ಕಲ್ಯಾಣ ಕರ್ನಾಟಕದ ಎರಡನೇ ಹಾಗೂ ರಾಜ್ಯದ ಪಾಲಿಗೆ ಎಂಟನೆಯದಾದ ಬೀದರ್‌ ನಾಗರಿಕ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು(ಶುಕ್ರವಾರ) ಚಾಲನೆ ನೀಡಲಿದ್ದಾರೆ. ಈ ಮೂಲಕ ಉಡಾನ್‌ ಯೋಜನೆಯಡಿ ಕರ್ನಾಟಕದ ಪ್ರಮುಖ ನಗರಗಳ ಮಧ್ಯೆ ವೈಮಾನಿಕ ಸಂಪರ್ಕ ಕಲ್ಪಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ರೂಜೆಟ್‌ (ಟಿಆರ್‌ಜೆ 625) ವಿಮಾನದ ಮೂಲಕ 11.30ಕ್ಕೆ ಬೀದರ್‌ನ ನೂತನ ಏರ್‌ಪೋರ್ಟ್‌ನಲ್ಲಿ ಬಂದಿಳಿಯಲಿದ್ದಾರೆ. ನಂತರ ಇಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸಚಿವರು, ಸಂಸದರಿಂದ ಪರಿಶೀಲನೆ:

ಜಿಲ್ಲಾ ಉಸ್ತುವಾರಿ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌, ಸಂಸದ ಭಗವಂತ ಖೂಬಾ ಅವರು ಈಗಾಗಲೇ ಬೀದರ್‌ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದು ವಿಮಾನ ನಿಲ್ದಾಣ ಬಹುತೇಕ ಸಿದ್ಧಗೊಂಡಿದೆ. ವಾಯುಸೇನೆಯ ತರಬೇತಿ ಕೇಂದ್ರದ ರನ್‌ವೇ ಬಳಸಿಕೊಂಡು ನಿರ್ಮಾಣವಾಗಿರುವ ಈ ಏರ್ಪೋರ್ಟ್‌ನ ಟರ್ಮಿನಲ್‌ ನಿರ್ಮಾಣ ಕಾಮಗಾರಿಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಿರುವುದು ವಿಶೇಷ.

ವಿಮಾನ ನಿಲ್ದಾಣದಲ್ಲಿ ಏನೇನಿದೆ?:

ಬೀದರ್‌ ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್‌ ಬೆಲ್ಟ್, ಸ್ಕ್ಯಾ‌ನಿಂಗ್‌ ಯಂತ್ರ, ವಿಐಪಿ ಲಾಂಜ್, ಜನರಲ್‌ ಲಾಂಜ್, ಆಗಮನ ನಿರ್ಗಮನ ಗೇಟ್‌ ವ್ಯವಸ್ಥೆ ಸೇರಿ ಅಗತ್ಯ ಎಲ್ಲ ಅಗತ್ಯ ಸೌಲಭ್ಯಗಳಿದ್ದು, ವಿಮಾನ ನಿಲ್ದಾಣವು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಸಿಸಿ ಟೀವಿ ಸರ್ಪಗಾವಲು ಇದೆ. ಜೊತೆಗೆ ವೈಫೈ ಸೇವೆಯನ್ನೂ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಎರಡು ರಕ್ಷಣಾ ಟವರ್‌ಗಳನ್ನು ನಿರ್ಮಿಸಲಾಗಿದೆ. ಜಿಎಂಆರ್‌ ಹೈದ್ರಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. (ಜಿಎಚ್‌ಐಎಎಲ್‌)ನ ಜಿಎಂಆರ್‌ ಇನ್ಫ್ರಾಸ್ಟ್ರಕ್ಷರ್‌ ಲಿ ಸಂಸ್ಥೆಯು ಟರ್ಮಿನಲ್‌ ನಿರ್ವಹಣೆ ಹೊಣೆ ಹೊತ್ತುಕೊಂಡಿದೆ. ಸದ್ಯ ಬೀದರ್‌ ಮತ್ತು ಬೆಂಗಳೂರು ಮಧ್ಯೆ ವಿಮಾನ ಸಂಪರ್ಕ ಇರಲಿದ್ದು, ಮುಂದಿನ ದಿನಗಳಲ್ಲಿ ಮುಂಬೈ, ನವದೆಹಲಿ, ಹುಬ್ಬಳ್ಳಿ, ಬೆಳಗಾವಿಗಳಂಥ ನಿಲ್ದಾಣಗಳ ನಡುವೆಯೂ ಸಂಪರ್ಕ ಆರಂಭವಾಗುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಏರ್ಪೋರ್ಟ್‌?

ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಶಿವಮೊಗ್ಗ ಮತ್ತು ಬೀದರ್‌.