ಹುಬ್ಬಳ್ಳಿ(ಸೆ.21): ಪ್ರಧಾನಿ ನರೇಂದ್ರ ಮೋದಿಯವರು ವ್ಯಕ್ತಿಯಲ್ಲ, ದೇವಮಾನವ. ಅವರನ್ನು ನಾನು ರಾಜರ್ಷಿ ಎಂದು ಕರೆಯುತ್ತೇನೆ. ಬೆಂಗಳೂರು ಅಭಿವೃದ್ಧಿ ಕುರಿತು ಅವರ ಕಲ್ಪನೆ, ಅವರಿಗಿರುವ ಮಾಹಿತಿ ನನ್ನನ್ನು ಅಚ್ಚರಿಗೊಳಿಸಿದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಭಾನುವಾರ ಹುಬ್ಬಳ್ಳಿ ಹಾಗೂ ಬೆಂಗಳೂರು ನಡುವಿನ ವರ್ಚುವಲ್‌ ರಾರ‍ಯಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅವರ ಜನ್ಮದಿನದ ನಿಮಿತ್ತ ದೆಹಲಿಗೆ ತೆರಳಿ ಭೇಟಿಯಾಗಿ 40 ನಿಮಿಷ ಅವರೊಡನೆ ಮಾತನಾಡಿದ್ದೆ. ಬೆಂಗಳೂರಿನ ಅಭಿವೃದ್ಧಿ ಕುರಿತು ಅವರ ಕಲ್ಪನೆ, ಅವರು ನೀಡಿದ ಮಾಹಿತಿ ನನ್ನನ್ನು ಅಚ್ಚರಿಗೊಳಿಸಿದೆ ಎಂದು ಹೇಳಿದರು.

ಕಿಮ್ಸ್‌ನಲ್ಲಿ ಎಚ್‌ಐವಿ ಪಾಸಿಟಿವ್‌, ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್‌: ಅಂಗವಿಕಲ ಮಹಿಳೆಯ ಬದುಕು ಅತಂತ್ರ

ರಾಜ್ಯದಲ್ಲಿ ಕಲಬುರ್ಗಿ ವಿಮಾನ ನಿಲ್ದಾಣ ಸ್ಥಾಪನೆ, ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿದಂತೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದರಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಿದೆ ಎಂದರು. ಕೋವಿಡ್‌ ಸಂಕಷ್ಟದ ವೇಳೆಯಲ್ಲಿಯೂ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಪ್ರಯತ್ನ ಮಾಡಿದ್ದಾರೆ. ತಾಯಿ, ತಾಯ್ನಾಡು ಸ್ವರ್ಗಕ್ಕಿಂತ ಮೇಲು ಎಂಬಂತೆ ಕೆಲಸ ಮಾಡುತ್ತಿರುವ ಅವರು, ದೇಶದ ಯುವ ಜನತೆ ಪರಿಶ್ರಮ, ಸಮಯ ಪಾಲನೆ, ಪ್ರಾಮಾಣಿಕತೆಯಿಂದ ಮುನ್ನಡೆಯಲಿ ಎಂದು ಬಯಸುತ್ತಿದ್ದಾರೆ ಎಂದರು.

ಜಗತ್ತಿಗೆ ಮಾದರಿಯಾದ ವ್ಯಕ್ತಿ ನಮ್ಮ ದೇಶವನ್ನು ಮುನ್ನಡೆಸುತ್ತಿರುವುದು ಈ ದೇಶದ 130 ಕೋಟಿ ಜನರ ಪುಣ್ಯ. ಅವರ ಅವಧಿಯಲ್ಲಿ ಕೃಷಿ, ಕೈಗಾರಿಕೆ, ಶಿಕ್ಷಣ ಹಾಗೂ ಸೇವಾ ವಲಯಗಳು ಅಭಿವೃದ್ಧಿ ಕಾಣುತ್ತಿವೆ. ಸ್ಪಷ್ಟ ವಿದೇಶಾಂಗ ನೀತಿಯ ಮೂಲಕ ಭಾರತಕ್ಕೆ ಮನ್ನಣೆ ದೊರಕಿದಂತಾಗಿದೆ. 6 ವರ್ಷದಲ್ಲಿ ಇಷ್ಟು ಸಾಧನೆ ಮಾಡಿರುವ ಭಾರತ ಮುಂದಿನ ಬಾರಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.