ಬೆಂಗಳೂರು(ಫೆ.03): ಬಿಡಿಎ ಅಕ್ರಮಗಳಿಗೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮಕೈಗೊಂಡಿದ್ದು ಮೂರ್ನಾಲ್ಕು ತಿಂಗಳಲ್ಲಿ ಸುಧಾರಣೆ ಮಾಡಿಯೇ ತೀರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ. 

ಆಡಳಿತ ಪಕ್ಷದ ಶಾಸಕ ಅರಗ ಜ್ಞಾನೇಂದ್ರ ಅವರ ಆರೋಪಕ್ಕೆ ಉತ್ತರಿಸಿದ ಅವರು, ಬಿಡಿಎನಲ್ಲಿ ಸುಧಾರಣೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ನಿವೇಶನಗಳಿಗೆ ದಾಖಲೆ ಇಲ್ಲದಿರುವುದು ಗೊತ್ತಿದೆ. ಅಧಿಕಾರಿಗಳ ಸಾಮೂಹಿಕ ವರ್ಗಾವಣೆಗೂ ಕ್ರಮಕೈಗೊಳ್ಳಲಾಗಿದೆ. ಬಿಡಿಎನಲ್ಲಿ ಯಾರೂ ಊಹಿಸಲಾರದಷ್ಟು ಅಕ್ರಮಗಳು ನಡೆದಿವೆ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರಾಧಿಕಾರದ ಎಲ್ಲ ನಿವೇಶನಗಳನ್ನು ವಶಕ್ಕೆ ಪಡೆದು, ಬಡಜನರಿಗೆ ಕೊಡುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಡಿಎ ಅಕ್ರಮಗಳ ಬಗ್ಗೆ ಅರಗ ಜ್ಞಾನೇಂದ್ರ, ನನಗೆ ಕೊಟ್ಟ‘ಜಿ’ ಕೆಟಗರಿ ನಿವೇಶನದಲ್ಲಿ ಇನ್ನೂ ಮನೆ ಕಟ್ಟಲು ಸಾಧ್ಯವಾಗಿಲ್ಲ. ನನ್ನ ನಿವೇಶನಕ್ಕೆ ಯಾರೋ ನಕಲಿ ದಾಖಲೆ ನೀಡಿ ವ್ಯಾಜ್ಯ ಶುರು ಮಾಡಿದ್ದಾರೆ. ಹೀಗಾಗಿ ನನಗೆ ಇನ್ನೂ ನಿವೇಶನ ಸಿಕ್ಕಿಲ್ಲ. ಬಿಡಿಎಯಲ್ಲಿ ಇಂತಹ ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು.

ಈ ವೇಳೆ ಜ್ಞಾನೇಂದ್ರ ಅವರು ಮಾಡಿದ ಆರೋಪಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌, ಸುಮ್ಮನೆ ಯಾಕೆ ನೀವು ಆರೋಪ ಮಾಡುತ್ತೀರಿ? ನಿಮ್ಮ ಭಾಷಣ ಕೇವಲ ಭಾಷಣ ಆಗಬಾರದು. ನಿಮ್ಮ ಮಾತು ಕೇಳಿ ಮುಖ್ಯಮಂತ್ರಿಗಳು ಏನಾದರು ಕ್ರಮ ತೆಗೆದುಕೊಳ್ಳಬೇಕಲ್ಲವೆ ಎಂದು ಮುಖ್ಯಮಂತ್ರಿಗಳನ್ನು ಕೆಣಕಿದರು. ಇದರಿಂದ ಎಚ್ಚೆತ್ತ ಮುಖ್ಯಮಂತ್ರಿ ಯಡಿಯೂರಪ್ಪ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಬಿಡಿಎನಲ್ಲಿ ಸಮಗ್ರ ಬದಲಾವಣೆ ಮಾಡುತ್ತೇನೆ. ನೀವೇ ನೋಡ್ತಾ ಇರಿ ಪಾಟೀಲರೇ, ಅಕ್ರಮಗಳಿಗೆ ಕಡಿವಾಣ ಹಾಕುತ್ತೇನೆ ಎಂದರು.

ವಾಣಿಜ್ಯ ಮಳಿಗೆಯಿಂದ ಬಿಡಿಎಗೆ 40 ಕೋಟಿ ರು. ಬಾಡಿಗೆ ಬಾಕಿ

ಪ್ರತಿ ಚ.ಅಡಿಗೆ 2 ಸಾವಿರ!

ಅರಗ ಜ್ಞಾನೇಂದ್ರ ಮಾತನಾಡಿ, ಬಿಡಿಎ ಖಾಲಿ ನಿವೇಶನಗಳನ್ನು ಅಧಿಕಾರಿಗಳು ತೋರಿಸದೆ ಮುಚ್ಚಿಟ್ಟಿರುತ್ತಾರೆ. ಪ್ರತಿ ಚದರ ಅಡಿಗೆ ಒಂದು ಅಥವಾ ಎರಡು ಸಾವಿರದಂತೆ ಹಣ ಕೊಟ್ಟರೆ ಮಾತ್ರ ನಿವೇಶನಗಳ ಮಾಹಿತಿ ದೊರೆಯುತ್ತದೆ. ಇಂತಹ ಖಾಲಿ ನಿವೇಶನಗಳ ಮಾಹಿತಿ ಕೆಲವೇ ಅಧಿಕಾರಿಗಳಿಗೆ ಮಾತ್ರ ಗೊತ್ತಿರುತ್ತದೆ ಎಂದು ಆರೋಪಿಸಿದರು.

ಅದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಸತೀಶ್‌ರೆಡ್ಡಿ, ಬಿಡಿಎಗೆ ಭೂಮಿ ಕೊಟ್ಟರೈತರಿಗೆ ಅದೇ ಜಾಗದಲ್ಲಿ ನಿವೇಶನ ಕೊಡುತ್ತಿಲ್ಲ. ಬೇರೆ ಪ್ರದೇಶಗಳಲ್ಲಿ ನಿವೇಶನ ಕೊಡುತ್ತೇವೆ ಎಂದು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನ ಹರಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.

20 ವರ್ಷ ತಿರುಗಿದರೂ ಬದಲಿ ನಿವೇಶನ ಸಿಕ್ಕಿಲ್ಲ!

ಬಿಡಿಎ ಅಧ್ಯಕ್ಷ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಳ್ಳೆಯ ಸಂಸ್ಥೆ. ಆದರೆ, ಕೆಲವು ಭ್ರಷ್ಟ ಅಧಿಕಾರಿಗಳಿಂದ ಕೆಟ್ಟ ಹೆಸರು ಬಂದಿದೆ. ಜನಸಾಮಾನ್ಯರಿಗೆ ಇರಲಿ, ಸಾಕಷ್ಟು ಶಾಸಕರಿಗೇ ನಿವೇಶನ ಕೊಟ್ಟಿಲ್ಲ. ಕಳೆದ ಎರಡು ತಿಂಗಳ ಹಿಂದೆ ಮಾಜಿ ಸಚಿವ, ಶಾಸಕ ಮನಗೂಳಿ ಅವರು ಬಿಡಿಎ ಕಚೇರಿಗೆ ಬಂದಿದ್ದರು. 20 ವರ್ಷಗಳ ಹಿಂದೆ ಬಿಡಿಎಯಿಂದ ಪಡೆದ ನಿವೇಶನದ ಮೇಲೆ ವ್ಯಾಜ್ಯ ಇದೆ. ಬದಲಿ ನಿವೇಶನ ಕೊಡುವುದಾಗಿ ಹೇಳಿದ್ದರೂ ಈವರೆಗೂ ಬದಲಿ ನಿವೇಶನ ಕೊಟ್ಟಿಲ್ಲ ಎಂದಿದ್ದರು. ಇದೇ ರೀತಿಯ ಸಮಸ್ಯೆಗೆ ಸಿಲುಕಿದ್ದ ಕೆ.ಸಿ.ಕೊಂಡಯ್ಯ ಅವರು ಕಳೆದ 15 ವರ್ಷಗಳಿಂದ ತಿರುಗಿದ್ದಾರೆ. ಬಿಡಿಎನಲ್ಲಿ ಇಂತಹ ಹಲವು ಪ್ರಕರಣಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು.