ಬೆಂಗಳೂರು(ಜ.29): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಒಡೆತನದ ವಾಣಿಜ್ಯ ಸಂಕೀರ್ಣಗಳಿಂದ ಬಾಕಿ ಇರುವ ಸುಮಾರು 40 ಕೋಟಿ ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿಡಿಎ ಕೇಂದ್ರ ಕಚೇರಿಯಲ್ಲಿ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣಗಳ ಸ್ಥಿತಿಗತಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಇಂದಿರಾನಗರದ ಎರಡು ವಾಣಿಜ್ಯ ಸಂಕೀರ್ಣಗಳಿಂದ 14.40 ಕೋಟಿ ಬಾಡಿಗೆ ಸಂಗ್ರಹ ಬಾಕಿ ಇದೆ. ಕೆಲವು ಅಂಗಡಿಗಳ ಬಾಡಿಗೆದಾರರು ಬಿಡಿಎ ವಾಣಿಜ್ಯ ಸಂಕೀರ್ಣ ಖಾಲಿ ಮಾಡಿ ಹೋಗಿದ್ದು, ಅವರ ವಿಳಾಸ ಪತ್ತೆಯಾಗಿಲ್ಲ ಎಂದು ಕಾರಣ ನೀಡುತ್ತಿದ್ದೀರಿ. ಬಾಡಿಗೆದಾರರಿಂದ ಬಾಕಿ ವಸೂಲಿ ಮಾಡದೆ ಕರ್ತವ್ಯ ಲೋಪ ಮಾಡುವ ಮೂಲಕ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದ್ದೀರಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

'ಜಮೀನು ಕೊಟ್ಟ ರೈತರಿಗೆ ಅವರ ಜಾಗದಲ್ಲೇ ಬಿಡಿಎ ನಿವೇಶನ'

ಎಚ್‌ಎಸ್‌ಆರ್‌ ಲೇಔಟ್‌ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಮಾಲೀಕರಿಂದಲೂ 10 ಕೋಟಿಗೂ ಅಧಿಕ ಬಾಕಿ ಬರಬೇಕಿದೆ. ನಾಗರಬಾವಿ, ಬನಶಂಕರಿ 2ನೇ ಹಂತ, ವಳಗೇರಹಳ್ಳಿ, ಆರ್‌ಟಿ ನಗರ, ರಾಜಮಹಲ್‌ವಿಲಾಸ್‌(ಆರ್‌ಎಂವಿ), ಆಸ್ಟಿನ್‌ ಟೌನ್‌, ದೊಮ್ಮಲೂರು, ಎಚ್‌ಬಿಆರ್‌ ಲೇಔಟ್‌, ಕೋರಮಂಗಲ ಸೇರಿದಂತೆ 15 ವಾಣಿಜ್ಯ ಸಂಕೀರ್ಣಗಳಿಂದ ಒಟ್ಟು 40 ಕೋಟಿಗೂ ಅಧಿಕ ಬಾಡಿಗೆ ವಸೂಲಿ ಮಾಡಬೇಕಿದೆ. 15 ದಿನಗಳೊಳಗೆ ಬಿಡಿಎ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರಿಗೆ ನೋಟಿಸ್‌ ಜಾರಿಗೊಳಿಸಿ ಬಾಡಿಗೆ ವಸೂಲಿ ಪ್ರಕ್ರಿಯೆ ನಡೆಸಬೇಕು ಎಂದು ಸೂಚಿಸಿದರು.

ಸರ್ಕಾರಿ ಕಚೇರಿಗಳು ಬಿಡಿಎ ಕಾಂಪ್ಲೆಕ್ಸ್‌ ಮಳಿಗೆಗಳನ್ನು ಬಾಡಿಗೆ ಪಡೆದು ಬಾಡಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಇಂತಹ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ವ್ಯವಹಾರವನ್ನು ನಡೆಸಿ ಬಾಡಿಗೆ ಸಂದಾಯ ಮಾಡುವಂತೆ ತಿಳಿಸಬೇಕೆಂದು ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದರು.