ತುಮಕೂರು(ಜ.22):  ನಡೆದಾಡುವ ದೇವರು ಲಿಂ. ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಲಿದೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.

ಅವರು ಗುರುವಾರ ಸಿದ್ದಗಂಗಾಮಠದಲ್ಲಿ ನಡೆದ ಲಿಂ. ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅನ್ನದಾಸೋಹದ ಜತೆಗೆ ಅಕ್ಷರ ಕಲಿಸಿದ ಸಿದ್ದಗಂಗಾ ಶ್ರೀಗಳು ಪ್ರಾತಃಸ್ಮರಣೀಯರು ಯಡಿಯೂರಪ್ಪ ಬಣ್ಣಿಸಿದರು.

ಇಂದು ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ 2ನೇ ಪುಣ್ಯಸ್ಮರಣೆ, ಮಠದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ

ವೀರಾಪುರ ತೀರ್ಥಕ್ಷೇತ್ರವಾಗಬೇಕು:

ಶಿವಕುಮಾರ ಶ್ರೀಗಳ ಬದುಕು, ಸಾಧನೆ ಸಾರುವ ಉದ್ದೇಶದಿಂದ ಪೂಜ್ಯರ ಹುಟ್ಟೂರಾದ ವೀರಾಪುರದಲ್ಲಿ 111ಅಡಿ ಎತ್ತರದ ಪುತ್ಥಳಿ, ಗ್ರಾಮದ ಅಭಿವೃದ್ಧಿಗೆ 25 ಕೋಟಿ ಬಿಡುಗಡೆ ಮಾಡಲಾಗಿದೆ. ವೀರಾಪುರ ತೀರ್ಥಕ್ಷೇತ್ರವಾಗಬೇಕು ಎಂದು ತಿಳಿಸಿದರು.

ಕೋಟ್ಯಂತರ ಭಕ್ತರಿಗೆ ದೇವರಾಗಿದ್ದ ಶಿವಕುಮಾರ ಶ್ರೀಗಳು, ಅನ್ನ, ಅರಿವು, ಆಶ್ರಯ ನೀಡಿ ತ್ರಿವಿಧ ದಾಸೋಹ ನೀಡಿದ್ದಾರೆ. ಜಾತಿ,ಧರ್ಮ ಭೇದವಿಲ್ಲದೆ ಶಿಕ್ಷಣ ನೀಡಿ ಅವರ ಬಾಳಿನ ಬೆಳಕಾಗಿದ್ದಾರೆ ಎಂದು ಯಡಿಯೂರಪ್ಪ ಪ್ರಶಂಶಿಸಿದರು.
ನಡೆದಾಡುವ ದೇವರೆಂದೇ ಭಾವಿಸಿದ್ದ ಶಿವಕುಮಾರ ಶ್ರೀಗಳ ಎದುರು ಭಕ್ತರು ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಳ್ಳುತ್ತಿದ್ದರು. ಡಾ. ಶಿವಕುಮಾರ ಸ್ವಾಮಿಗಳ ಸ್ಮರಣೆಯಿಂದಲೇ ತಮ್ಮ ದಿನಚರಿ ಆರಂಭವಾಗುತ್ತದೆ. ಅವರನ್ನು ಸ್ಮರಿಸದೆ ಒಂದು ದಿನವನ್ನು ಕಳೆದಿಲ್ಲ. ತಾವು ಸಿದ್ದಗಂಗೆಗೆ ಬಂದಾಗಲೆಲ್ಲಾ ಶ್ರೀಗಳು ತಮ್ಮ ಒಳಗಿನ ರೂಂಗೆ ಕರೆದೊಯ್ದು ಸಲಹೆ ಕೊಡುತ್ತಿದ್ದರು. ಎಂತದೇ ಸಂದರ್ಭದಲ್ಲೂ ಮಠದಿಂದ ಪ್ರಸಾದ ಸ್ವೀಕರಿಸದೇ ಹೋಗಬಾರದು ಎಂದು ಹೇಳುತ್ತಿದ್ದರು. ಕಳೆದ ಶತಮಾನದ ಪಲ್ಲಟಗಳಿಗೆ ಸಾಕ್ಷಿಯಾಗಿದ್ದ ಶ್ರೀಗಳು, 80 ವರ್ಷಗಳ ಕಾಲ ಅಕ್ಷರ, ಅನ್ನ ವಂಚಿತ ಮಕ್ಕಳಿಗೆ ಆಶ್ರಯದಾತರಾಗಿದ್ದರು ಎಂದು ಯಡಿಯೂರಪ್ಪ ಸ್ಮರಿಸಿದರು.