Nanjangud: ಹೆಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆಗೆ ಸಂಪುಟ ಅಸ್ತು

ತಾಲೂಕಿನ ಹೆಡಿಯಾಲ ಭಾಗದ 13 ಕೆರೆಗಳನ್ನು ತುಂಬಿಸುವ ಮಹತ್ವಕಾಂಕ್ಷೆ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 30.5 ಕೋಟಿಗೆ ಅನುಮೋದನೆ ನೀಡಿದೆ.

cm bommai cabinet has approved the Hediala side lake filling project at nanjangud gvd

ನಂಜನಗೂಡು (ಸೆ.16): ತಾಲೂಕಿನ ಹೆಡಿಯಾಲ ಭಾಗದ 13 ಕೆರೆಗಳನ್ನು ತುಂಬಿಸುವ ಮಹತ್ವಕಾಂಕ್ಷೆ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 30.5 ಕೋಟಿಗೆ ಅನುಮೋದನೆ ನೀಡಿದ್ದು, ಈ ಭಾಗದ ರೈತರ ಹಲವು ದಶಕಗಳ ಬೇಡಿಕೆಯನ್ನು ಶಾಸಕ ಬಿ.ಹರ್ಷವರ್ಧನ್‌ ಸಾಕಾರಗೊಳಿಸುವ ಮೂಲಕ ರೈತರ ಮೊಗದಲ್ಲಿ ಹರ್ಷದ ಹೊನಲು ಮೂಡಿಸಿದ್ದಾರೆ.

ಬರಪೀಡಿತ ಪ್ರದೇಶವಾಗಿರುವ ಈ ಭಾಗದ ಗ್ರಾಮಗಳಲ್ಲಿ ಜನ, ಜಾನುವಾರು ಕುಡಿಯಲು ಹಾಗೂ ಕೃಷಿ ಚಟುವಟಿಕೆ ಕೈಗೊಳ್ಳಲು ನೀರಿಲ್ಲದೇ ಜನರು ಪರಿತಪಿಸುತ್ತಿದ್ದರು. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವರು ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಲೇ ಇಲ್ಲ. ಆದರೆ ಶಾಸಕ ಬಿ. ಹರ್ಷವರ್ಧನ್‌ ಈ ಭಾಗದ ಜನರ ಬವಣೆಗೆ ಸ್ಪಂದಿಸುವ ಮೂಲಕ 35 ಕೋಟಿ ವೆಚ್ಚದಲ್ಲಿ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಜನರ ಆಶೋತ್ತರಕ್ಕೆ ಧ್ವನಿಯಾಗಿದ್ದಾರೆ.

Mysuru: ಬಿಜೆಪಿಗರು ಕನ್ನಡಕ್ಕೆ ದ್ರೋಹ ಎಸಗುತ್ತಿದ್ದಾರೆ: ಎಚ್‌.ಸಿ.ಮಹದೇವಪ್ಪ

ಯೋಜನೆಯ ವಿವರ: ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಬಳಿ ನುಗು ನದಿಯಿಂದ ನೀರೆತ್ತುವ ಮೂಲಕ ನಂಜನಗೂಡು ತಾಲೂಕಿನ 9 ಹಾಗೂ ಸರಗೂರು ತಾಲೂಕಿನ 4 ಸೇರಿ ಒಟ್ಟು 13 ಕೆರೆಯ ನೀರು ತುಂಬಿಸುವ ಮಹತ್ವಕಾಂಕ್ಷೆ ಯೋಜನೆಯಿಂದ ನೀರಾವರಿಯೇತರ ಮಳೆ ಭಾದಿತ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಸದರಿ ಯೋಜನೆಯಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ ಹಾಗೂ ಅಂಜರ್ತಲ ಮಟ್ಟಸುಧಾರಣೆ ಆಗಲಿದೆ.

ನಂಜನಗೂಡು ತಾಲೂಕಿನ ಚಿಲಕಹಳ್ಳಿ ಕೆರೆ, ಪಾರ್ವತಿಪುರ ಕಳ್ಳನಕಟ್ಟೆ, ಹೆಡಿಯಾಲ ಕೆರೆ, ವೆಂಕಟಾಚಲಪುರ ಕುದುರೆಗುಂಡಿ ಕೆರೆ, ಕಂದೇಗಾಲ ಕೆರೆ ಮತ್ತುಕಟ್ಟೆ, ಬೀರೆದೇವನಪುರ ಆಮಕಹಳ್ಳಿ ಕೆರೆ, ಹೊಸವೀಡುಕೆರೆ, ಮಡುವಿನಹಳ್ಳಿ ಕೆರೆ ಹಾಗೂ ಸರಗೂರು ತಾಲೂಕಿನ ಬಡಗಲಪುರ ಕೆರೆ, ಹೊಸಬೀರ್ವಾಳು ಜೋಡಿಕೆರೆ, ಹೊಸಹೆಗ್ಗಡುಲುಕೆರೆ ಹಾಗೂ ಚೆಂಗೌಡನಹಳ್ಳಿ ಕೆರೆಗಳು ಈ ಯೋಜನೆ ವ್ಯಾಪ್ತಿಗೆ ಬರಲಿವೆ. ಒಟ್ಟು 0.108 ಟಿಎಂಸಿ ನೀರು ಬಳಕೆಯಾಗಲಿದೆ.

ಈ ಗ್ರಾಮಗಳನ್ನು ಬರಪೀಡಿತ ಪ್ರದೇಶವೆಂದು ಗುರುತಿಸಲಾಗಿದ್ದು, ವಾರ್ಷಿಕ ಸರಾಸರಿ ಮಳೆ ಬಹಳ ಕಡಿಮೆ ಇರುತ್ತದೆ. ಈ ತಾಲೂಕಿನ ಬಹುತೇಕ ಜನರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಳ ಹಿಂದುಳಿದವರಾಗಿದ್ದು, ಬಹಳಷ್ಟುಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟಕುಸಿದಿರುವುದರಿಂದ ನೀರಿನ ಲಭ್ಯತೆಇಲ್ಲದೇ ಸುಮಾರು 600 ಅಡಿ ಆಳದವರೆಗೆ ಕೊರೆಯಲಾಗಿರುವ ಕೊಳವೆ ಬಾವಿಗಳಲ್ಲಿ ದೊರೆಯುವ ಅಲ್ಪ ಪ್ರಮಾಣದ ನೀರು ಸಹಾ ನೈಟ್ರೈಟ್‌ಯುಕ್ತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಈ ಭಾಗದ ಕೆರೆಗಳು ತುಂಬಿದರೆ ನೀರಿನ ಬವಣೆ ನೀಗಲಿದೆ.

ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ: ಡಿಕೆಶಿ ಸ್ಫೋಟಕ ಆರೋಪ

ಹೆಡಿಯಾಲ, ಹುರಾ, ಹುಲ್ಲಹಳ್ಳಿ ಭಾಗಕ್ಕೆ ನಾನು ಚುನಾವಣೆ ಸಂದರ್ಭದಲ್ಲಿ ಹೋಗಿದ್ದಾಗ ನುಗು ಏತ ನೀರಾವರಿ ಹಾಗೂ ಹೆಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಬೇಕು, ನಮ್ಮ ಕೂಗಿಗೆ ಯಾರು ಧ್ವನಿಯಾಗುತ್ತಿಲ್ಲ ಎಂದು ಜನರು ಅಲವತ್ತುಕೊಂಡಿದ್ದರು. ನಾನು ಶಾಸಕನಾದರೆ ಈ ಯೋಜನೆ ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದ್ದೆ. ಅಂತೆಯೇ ಜನರ ಆಶೀರ್ವಾದದಿಂದ ಶಾಸಕನಾಗಿ ಅವರ ಆಶಯವನ್ನು ಸಾಕಾರಗೊಳಿಸಿದ್ದೇನೆ ಎಂಬ ಆತ್ಮತೃಪ್ತಿಯಿದೆ. ದಸರಾ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಈ ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ನಂಜನಗೂಡಿಗೆ ಆಗಮಿಸಲಿದ್ದಾರೆ.
-ಶಾಸಕ ಬಿ. ಹರ್ಷವರ್ಧನ್‌, ನಂಜನಗೂಡು ಶಾಸಕ

Latest Videos
Follow Us:
Download App:
  • android
  • ios