ಉತ್ತರಕನ್ನಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಿನ ತಿಂಗಳು ಸಿಎಂ ಶಂಕು ಸ್ಥಾಪನೆ?
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಉತ್ತರಕನ್ನಡ ಜಿಲ್ಲೆಯ ಹಲವು ವರ್ಷಗಳ ಬೇಡಿಕೆ. ಆಸ್ಪತ್ರೆ ನಿರ್ಮಾಣಕ್ಕಾಗಿ ಸಾಕಷ್ಟು ಹೋರಾಟ, ಅಭಿಯಾನಗಳು ನಡೆದಿದ್ದವು. ಇದೀಗ ಮುಂದಿನ ತಿಂಗಳು ಶಂಕು ಸ್ಥಾಪನೆಗಾಗಿ ಸಿಎಂ ಜಿಲ್ಲೆಗೆ ಭೇಟಿ ನೀಡುವುದಾಗಿ ಮಾಹಿತಿಯಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್
ಉತ್ತರಕನ್ನಡ (ಫೆ.23): ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಉತ್ತರಕನ್ನಡ ಜಿಲ್ಲೆಯ ಹಲವು ವರ್ಷಗಳ ಬೇಡಿಕೆ. ಆಸ್ಪತ್ರೆ ನಿರ್ಮಾಣಕ್ಕಾಗಿ ಸಾಕಷ್ಟು ಹೋರಾಟ, ಅಭಿಯಾನಗಳು ನಡೆದಿದ್ದವು. ಬಳಿಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕುಮಟಾದ ಮಿರ್ಜಾನ್‌ನಲ್ಲಿ ಸ್ಥಳ ಪರಿಶೀಲಿಸಿ ತೆರಳಿದ್ದು, ಜಿಲ್ಲೆಗೆ ಭೇಟಿ ನೀಡಿದ್ದ ಬಸವರಾಜ ಬೊಮ್ಮಾಯಿ ಕೂಡಾ ಕುಮಟಾದಲ್ಲೇ ಆಸ್ಪತ್ರೆ ನಿರ್ಮಾಣ ಮಾಡೋದಾಗಿ ತಿಳಿಸಿದ್ದರು. ಇದೀಗ ಮುಂದಿನ ತಿಂಗಳು ಶಂಕು ಸ್ಥಾಪನೆಗಾಗಿ ಸಿಎಂ ಜಿಲ್ಲೆಗೆ ಭೇಟಿ ನೀಡುವುದಾಗಿ ಮಾಹಿತಿಯಿದ್ದು, ಯಾವುದೇ ಪ್ರಕ್ರಿಯೆಗಳು ನಡೆಯದೇ ಸಿಎಂ ಶಂಕು ಸ್ಥಾಪನೆಗೆ ಬರುತ್ತಿರುವ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಜಿಲ್ಲೆಯ ಜನರು ದಶಕಗಳಿಂದ ಹೋರಾಟ ನಡೆಸುತ್ತಿದ್ದರು. ಇದಕ್ಕಾಗಿ ಸಾಕಷ್ಟು ಪ್ರತಿಭಟನೆ, ಟ್ವಿಟ್ಟರ್ ಅಭಿಯಾನ, ಬ್ಲಡ್ ಲೆಟರ್ ಅಭಿಯಾನಗಳು ಕೂಡಾ ನಡೆದಿದ್ದವು. ಜಿಲ್ಲೆಯ ಜನಪ್ರತಿನಿಧಿಗಳು ಕೂಡಾ ಸಾಕಷ್ಟು ಬಾರಿ ಕೇಂದ್ರ ಹಾಗೂ ರಾಜ್ಯ ಸರಕಾರದ ಗಮನಕ್ಕೂ ತಂದಿದ್ದರು. ಕೊನೆಗೂ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಕುಮಟಾದ ಮಿರ್ಜಾನ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ತೆರಳಿದ್ದರು. ನಂತರ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಶೀಘ್ರದಲ್ಲಿ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡುವುದಾಗಿ ಹೇಳಿಕೆ ನೀಡಿದ್ದರು.
ಇದೀಗ ಫೆಬ್ರುವರಿ 28ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕುಮಟಾಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಲಾಗಿದ್ರೂ ಇದೀಗ ಅದು ಕೂಡಾ ಮುಂದಿನ ತಿಂಗಳಿಗೆ ಮುಂದುವರಿಕೆಯಾಗಿದೆ. ಸಿಎಂ ಜಿಲ್ಲೆಗೆ ಭೇಟಿ ನೀಡುತ್ತಿರುವ ವಿಚಾರವೇ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಾಗ ನಿಗದಿಯಾಗಿಲ್ಲ, ಬಜೆಟ್‌ನಲ್ಲಿ ಹಣವಿಟ್ಟಿಲ್ಲ, ಡಿಪಿಆರ್ ಅಂತೂ ಮೊದಲೇ ಆಗಿಲ್ಲ. ಮತ್ತೆ ಹೇಗೆ ಶಂಕು ಸ್ಥಾಪನೆ ಮಾಡಲು ಸಾಧ್ಯ. ಚುನಾವಣೆ ಹತ್ತಿರ ಬರುತ್ತಿದ್ದಂತೇ ಜನರ ಕಿವಿಯಲ್ಲಿ ಹೂ ಇಡಲು ಬರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆಯಷ್ಟೇ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಆದರೆ, ಬಜೆಟ್‌ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಹಣವೇ ಇಟ್ಟಿಲ್ಲ. ಇನ್ನು ಕುಮಟಾದ ಮಿರ್ಜಾನ್‌ನಲ್ಲಿ ನೋಡಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದರಿಂದ ಅರಣ್ಯ ಇಲಾಖೆಯಿಂದಲೂ ಈವೆರೆಗೆ ಯಾವುದೇ ಕ್ಲಿಯರೆನ್ಸ್ ದೊರೆತಿಲ್ಲ. ಆಸ್ಪತ್ರೆ ನಿರ್ಮಾಣಕ್ಕೆ ಡಿಪಿಆರ್ ಕೂಡಾ ತಯಾರಾಗಿಲ್ಲ. ಇವೆಲ್ಲಾ ಆಗದೇ ಸಿಎಂ ಕುಮಟಾಕ್ಕೆ ಬಂದು ಯೋಜನೆಗೆ ಹೇಗೆ ಶಂಕು ಸ್ಥಾಪನೆ ಮಾಡುತ್ತಾರೆ ಎಂಬುದು ಮುಂದಿರುವ ದೊಡ್ಡ ಪ್ರಶ್ನೆಯಾಗಿದ್ದು, ಇದೆಲ್ಲಾ ಚುನಾವಣೆ ಗಿಮಿಕ್. ಆಸ್ಪತ್ರೆ ನಿರ್ಮಾಣ ಮಾಡೋದಾದ್ರೆ ಸ್ಪಷ್ಟ ಮಾಹಿತಿ ನೀಡಿ ನಿರ್ಮಾಣ ಮಾಡಿ. ಜನರಿಗೆ ಹೂವಿಡುವ ಕೆಲಸ ಮಾಡಬೇಡಿ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರವಾರ: ಕಳಪೆ ಆಹಾರ, ರಸ್ತೆಯಲ್ಲಿ ಊಟದ ತಟ್ಟೆಯನ್ನಿಟ್ಟು ವಿದ್ಯಾರ್ಥಿಗಳ ಪ್ರತಿಭಟನೆ
ಒಟ್ಟಿನಲ್ಲಿ ಉತ್ತರಕನ್ನಡ (Uttara Kannada) ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (super speciality hospital) ನಿರ್ಮಾಣದ ಶಂಕುಸ್ಥಾಪನೆ ಕಾರ್ಯ ಪದೇ ಪದೇ ಮುಂದುವರಿಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಚುನಾವಣೆಯ ಮುನ್ನ ಸಿಎಂ ನಾಮಕೇ ವಾಸ್ತೆ ಶಂಕು ಸ್ಥಾಪನೆ ಮಾಡಿ ತೆರಳುತ್ತಾರೆ ಹೇಳಲಾಗುತ್ತಿದೆ. ಇದರ ಬದಲು ಸೂಕ್ತ ಮಾಹಿತಿಯೊಂದಿಗೆ ವ್ಯವಸ್ಥಿತವಾಗಿ ಆಸ್ಪತ್ರೆಗೆ ಶಂಕು ಸ್ಥಾಪನೆಗೆ ಮಾಡಿ ನಿರ್ಮಾಣ ಕಾರ್ಯ ಪ್ರಾರಂಭಿಸಲಿ ಎಂದು ಜನರ ಒತ್ತಾಯ.