ದೇಶದ ಮೊದಲ ರ‍್ಯಾಪಿಡ್‌ ರಸ್ತೆ ಅವ್ಯವಸ್ಥೆ, ರಸ್ತೆ ನಿರ್ಮಿಸದಂತೆ ಬಿಬಿಎಂಪಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಬೆಂಗಳೂರು(ಜ.14): ಪ್ರೀಕಾಸ್ಟ್‌ ತಂತ್ರಜ್ಞಾನ ಬಳಸಿ ನಗರದಲ್ಲಿ ನಿರ್ಮಾಣಗೊಂಡ ದೇಶದ ಮೊದಲ ರ‍್ಯಾಪಿಡ್‌ ರಸ್ತೆಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರ‍್ಯಾಪಿಡ್‌ ರಸ್ತೆ ನಿರ್ಮಾಣ ಮಾಡದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಕಳೆದ ಡಿ.8ರಂದು ಸಿ.ವಿ.ರಾಮನ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಳೇ ಮದ್ರಾಸ್‌ ರಸ್ತೆಯಲ್ಲಿ ಪ್ರಾಯೋಗಿಕವಾಗಿ 375 ಮೀಟರ್‌ ಉದ್ದದ ರ‍್ಯಾಪಿಡ್‌ ರಸ್ತೆ ನಿರ್ಮಾಣ ಮಾಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು. ಆದರೆ, ಕೇವಲ ಒಂದೇ ಒಂದು ತಿಂಗಳಲ್ಲಿ 375 ಮೀಟರ್‌ ಉದ್ದದ ರಸ್ತೆಯಲ್ಲಿ ಹಲವು ಕಡೆ ಬಿರುಕು ಬಿಟ್ಟಹಿನ್ನೆಲೆಯಲ್ಲಿ ರ‍್ಯಾಪಿಡ್‌ ರಸ್ತೆ ನಿರ್ಮಾಣ ಮಾಡದಂತೆ ಮುಖ್ಯಮಂತ್ರಿಗಳು ಬಿಬಿಎಂಪಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ರ‍್ಯಾಪಿಡ್‌ ರಸ್ತೆ ಬಗ್ಗೆ ಆಂತರಿಕ ಪರಿಶೀಲನೆ ನಡೆಸಲಾಗಿದೆ. ಇದೀಗ ಥರ್ಡ್‌ ಪಾರ್ಟಿ ಪರಿಶೀಲನೆ ನಡೆಸುವುದಕ್ಕೆ ಐಐಎಸ್‌ಸಿ ಅವರೊಂದಿಗೆ ಸೂಚನೆ ನೀಡಲಾಗಿದೆ. ಐಐಎಸ್ಸಿ ವರದಿ ಬಳಿಕ ರ‍್ಯಾಪಿಡ್‌ ರಸ್ತೆ ನಿರ್ಮಾಣ ಮಾಡಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಲ್ಲಿ ದೇಶದ ಮೊದಲ ರ‍್ಯಾಪಿಡ್‌ ರಸ್ತೆಗೆ ಸಿಎಂ ಬೊಮ್ಮಾಯಿ ಚಾಲನೆ

ಐಐಎಸ್ಸಿ ಅವರು ವರದಿಯಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಸಲಹೆ ನೀಡಲಿದ್ದಾರೆ. ಆ ಎಲ್ಲವನ್ನೂ ಗಮನಿಸಿ ಸರ್ಕಾರಿ ದರಕ್ಕೆ ಹೊಂದಿಕೊಳ್ಳುವಂತಿದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ನಿರ್ಮಾಣ ಮಾಡಲಾಗುವುದು. ಅಲ್ಲಿಯವರೆಗೆ ಯಾವುದೇ ಕ್ರಮ ಇಲ್ಲ ಎಂದರು.

15ನೇ ಹಣಕಾಸು ಆಯೋಗ ಹಾಗೂ ಬಿಬಿಎಂಪಿಯ ಅನುದಾನದಲ್ಲಿ ಸ್ವೀಪಿಂಗ್‌ ಯಂತ್ರ ಖರೀದಿಸಲಾಗುತ್ತಿದೆ. ಈ ಬಗ್ಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಅದಾದ ಬಳಿಕ ಎಷ್ಟುಯಂತ್ರ ಖರೀದಿ ಮಾಡಲಾಗುತ್ತಿದೆ ಎಂಬ ಅಂಶ ತಿಳಿಯಲಿದೆ ಎಂದು ಮಾಹಿತಿ ನೀಡಿದರು.

ವಸತಿ ಪ್ರದೇಶದ ವಾಣಿಜ್ಯ ಚಟುವಟಿಕೆಗೆ ನೋಟಿಸ್‌

ನಗರದಲ್ಲಿ ನಿಯಮ ಮೀರಿ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರಿಗೆ ನೋಟಿಸ್‌ ನೀಡಲಾಗುತ್ತಿದೆ. ಮಾಲೀಕರಿಂದ ಉತ್ತರ ಪಡೆದು ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.