Asianet Suvarna News Asianet Suvarna News

ಕೊರೋನಾ ಆತಂಕ: ವಿದೇಶದಲ್ಲಿ ಸಿಲುಕಿದವರ ಕರೆತರಲು ಸರ್ಕಾರ ಸಿದ್ಧತೆ

ಮರಳಿ ತವರಿಗೆ, ವಿದೇಶಗಳಲ್ಲಿ ಸಿಲುಕಿರುವ ರಾಜ್ಯದ 10,823 ಮಂದಿ|ಮೊದಲ ಹಂತದಲ್ಲಿ 6,100 ಮಂದಿ ವಾಪಸ್‌| ವಿವಿಧ ದೇಶಗಳಲ್ಲಿ ಸಿಲುಕಿರುವ ದೇಶದ ಜನರನ್ನ ವಾಪಸು ಸುರಕ್ಷಿತವಾಗಿ ಕರೆತಂದು ಅವರಿಂದ ಯಾರಿಗೂ ಸೋಂಕು ಹರಡದಂತೆ ಕ್ವಾರಂಟೈನ್‌ ಮಾಡಿ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ|

Minister Suresh Kumar Says Government is Preparing to Bing back those who were stranded Abroad
Author
Bengaluru, First Published May 1, 2020, 7:23 AM IST

ಬೆಂಗಳೂರು(ಮೇ.01):  ಕೊರೋನಾ ಕಾರಣ ವಿಮಾನ ಸಂಚಾರ ನಿರ್ಬಂಧದಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿರುವ ರಾಜ್ಯದ 10,823 ಮಂದಿ ನಾಗರಿಕರನ್ನು ವಾಪಸು ಕರೆತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಮೊದಲ ಹಂತದಲ್ಲಿ 6,100 ಮಂದಿಯನ್ನು ಕರೆದುಕೊಂಡು ಬಂದು ವಿಮಾನ ನಿಲ್ದಾಣದಲ್ಲೇ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್‌ ಮಾಡಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಎಸ್‌. ಸುರೇಶ್‌ಕುಮಾರ್‌, ವಿವಿಧ ದೇಶಗಳಲ್ಲಿ ಸಿಲುಕಿರುವ ದೇಶದ ಜನತೆಯನ್ನು ವಾಪಸು ಸುರಕ್ಷಿತವಾಗಿ ಕರೆತಂದು ಅವರಿಂದ ಯಾರಿಗೂ ಸೋಂಕು ಹರಡದಂತೆ ಕ್ವಾರಂಟೈನ್‌ ಮಾಡಿ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಪ್ರಥಮ ಪಿಯು ಫಲಿತಾಂಶ ಮೇ 5ಕ್ಕೆ , ಶಿಕ್ಷಣ ಇಲಾಖೆ ಸುತ್ತೋಲೆ

ಇದರ ಪ್ರಕಾರ ರಾಜ್ಯದ 10,823 ಮಂದಿ ಹೊರ ದೇಶದಲ್ಲಿ ಸಿಲುಕಿದ್ದಾರೆ. ಈ ಪೈಕಿ ಪ್ರವಾಸಿಗರಾಗಿ ವಿದೇಶಕ್ಕೆ ತೆರಳಿರುವ 4,408 ಮಂದಿ, ವಿದ್ಯಾಭ್ಯಾಸಕ್ಕೆ ತೆರಳಿರುವ 3,074 ಮಂದಿ ವಿದ್ಯಾರ್ಥಿಗಳು, ವಲಸಿಗರು ಹಾಗೂ ವೃತ್ತಿಪರರು 2,784 ಮಂದಿ, ಹಡಗಿನ ಸಿಬ್ಬಂದಿ 557 ಸೇರಿದಂತೆ ರಾಜ್ಯದ ಒಟ್ಟು 10,823 ಮಂದಿ ವಿವಿಧ ದೇಶಗಳಲ್ಲಿ ಸಿಲುಕಿದ್ದಾರೆ.

ಮೊದಲ ಹಂತದಲ್ಲಿ 6,100 ಮಂದಿ:

ಮೊದಲ ಹಂತದಲ್ಲಿ 6,100 ಮಂದಿ ಬೇಗ ವಾಪಸು ಬರಲಿದ್ದಾರೆ. ಇವರ ಕ್ವಾರಂಟೈನ್‌ ಹಾಗೂ ರೋಗ ಲಕ್ಷಣಗಳಿರುವವರ ಚಿಕಿತ್ಸೆಗೆ ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಅಗತ್ಯ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದು ಸುರೇಶ್‌ಕುಮಾರ್‌ ತಿಳಿಸಿದರು. ಮೊದಲ ಹಂತದಲ್ಲಿ ಕೆನಡಾದಿಂದ 328, ಅಮೆರಿಕದಿಂದ 927, ಯುಎಇ 2,575, ಖತಾರ್‌ 414, ಸೌದಿ ಅರೇಬಿಯಾದಿಂದ 927 ಪ್ರಯಾಣಿಕರು ರಾಜ್ಯಕ್ಕೆ ವಾಪಸಾಗಲಿದ್ದಾರೆ.

ಮೂರು ವಿಭಾಗಗಳಲ್ಲಿ ಕ್ವಾರಂಟೈನ್‌:

ರಾಜ್ಯಕ್ಕೆ ಕರೆತರುತ್ತಿರುವ ವ್ಯಕ್ತಿಗಳು ಸಿಲುಕಿರುವ ಬಹುತೇಕ ದೇಶಗಳಲ್ಲಿ ಕೊರೋನಾ ಸೋಂಕು ತಾಂಡವವಾಡುತ್ತಿದೆ. ಹೀಗಾಗಿ ಇವರನ್ನು ಕರೆ ತಂದು ವಿಮಾನ ನಿಲ್ದಾಣದಲ್ಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಈ ವೇಳೆ ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಮೂರು ವಿಭಾಗಗಳಲ್ಲಿ ಪ್ರತ್ಯೇಕಿಸಲಾಗುವುದು. ಸೋಂಕು ಲಕ್ಷಣಗಳಿದ್ದರೆ ವೈದ್ಯಕೀಯ ಸೌಲಭ್ಯಗಳೊಂದಿಗೆ ಕ್ವಾರಂಟೈನ್‌ ಮಾಡಿ ಕೂಡಲೇ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು. ರೋಗದ ಯಾವುದೇ ಲಕ್ಷಣಗಳು ಇಲ್ಲದವರಿಗೆ ಕಡ್ಡಾಯವಾಗಿ ಕಟ್ಟುನಿಟ್ಟಿನ ಹೋಂ ಕ್ವಾರಂಟೈನ್‌ಗೆ ಸೂಚಿಸಿ ನಿಗಾ ಇಡಲಾಗುವುದು.

ಉಳಿದಂತೆ 50 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವವರನ್ನು ‘ಎ’ ವಿಭಾಗವಾಗಿ ಗುರುತಿಸಿ ವೈದ್ಯಕೀಯ ವ್ಯವಸ್ಥೆಯೊಂದಿಗೆ ಕ್ವಾರಂಟೈನ್‌ ಮಾಡಲಾಗುವುದು. ಸೋಂಕು ಲಕ್ಷಣಗಳಿರುವವರು ಹಾಗೂ ಯಾವುದೇ ಲಕ್ಷಣಗಳು ಇಲ್ಲದವರನ್ನು ಪ್ರತ್ಯೇಕವಾಗಿ ವಿಭಜಿಸಲಾಗುವುದು.

ಇವರೆಲ್ಲರನ್ನೂ ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳಲ್ಲಿ ಸಾಮೂಹಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. 28 ದಿನಗಳ ಪರಿಶೀಲನೆ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಿ ಮನೆಗಳಿಗೆ ಕಳುಹಿಸಲು ಕಾರ್ಯಯೋಜನೆ ಸಿದ್ಧಪಡಿಸಿದ್ದೇವೆ. ಅವರು ಬರುವುದು ಯಾವಾಗ ಎನ್ನುವುದು ಇನ್ನೂ ನಿಶ್ಚಯವಾಗಿಲ್ಲ. ಹೀಗಾಗಿ ಕೊನೆ ಕ್ಷಣದಲ್ಲಿ ಕಾರ್ಯಯೋಜನೆಯಲ್ಲೂ ಕೆಲ ಬದಲಾವಣೆ ಉಂಟಾಗಬಹುದು ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
 

Follow Us:
Download App:
  • android
  • ios