Asianet Suvarna News Asianet Suvarna News

ಬೆಂಗಳೂರು: ಇಂದು ಮಧ್ಯಾಹ್ನ 12 ರೊಳಗೆ ರಸ್ತೆ ಗುಂಡಿ ಮುಚ್ಚಿ..!

ರಸ್ತೆ ಗುಂಡಿ ಮುಕ್ತ ಆಗಬೇಕು ಅಷ್ಟೇ, ನಗರದ ರಸ್ತೆಗಳ ಅವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಗರಂ, ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಗಡುವು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ಗೆ ಫುಲ್‌ ಕ್ಲಾಸ್‌ 

Close the Pothole by November 5th 12 noon Says BBMP Administrator Rakesh Singh grg
Author
First Published Nov 5, 2022, 6:14 AM IST

ಬೆಂಗಳೂರು(ನ.05):  ನಗರದ ರಸ್ತೆ ಗುಂಡಿ ವಿಚಾರವಾಗಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ದಿಢೀರ್‌ ಸಭೆ ನಡೆಸಿದ ರಾಕೇಶ್‌ ಸಿಂಗ್‌ ಅವರು, ರಸ್ತೆ ಗುಂಡಿ ಮುಚ್ಚುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ವಲಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಗುರುವಾರ ಮಲ್ಲೇಶ್ವರದಲ್ಲಿ ದಂಪತಿ ರಸ್ತೆ ಗುಂಡಿ ಮುಚ್ಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದು ಮತ್ತು ರಸ್ತೆ ಗುಂಡಿಯಿಂದ ಸಂಭವಿಸುತ್ತಿರುವ ಸಾವು-ನೋವು ಕುರಿತು ನಿರಂತರವಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರನ್ನು ಕರೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಕಾಸಸೌಧದಲ್ಲಿ ಬಿಬಿಎಂಪಿಯ ಎಂಟು ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಎಂಜಿನಿಯರ್‌ಗಳ ಸಭೆ ನಡೆಸಿ ಶನಿವಾರ ಮಧ್ಯಾಹ್ನ 12ರ ಒಳಗಾಗಿ ಕನಿಷ್ಠ ಪಕ್ಷ ಮುಖ್ಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಬೇಕು ಎಂದು ಗಡುವು ನೀಡಿದ್ದಾರೆ. ಅಲ್ಲದೇ ವಲಯ ಆಯುಕ್ತರು ಶುಕ್ರವಾರ ರಾತ್ರಿ 8ರಿಂದ ಆಯಾ ವಲಯ ಕಚೇರಿಯಲ್ಲಿ ಉಪಸ್ಥಿತರಿದ್ದು, ಎಂಜಿನಿಯರ್‌ಗಳೊಂದಿಗೆ ವಿವಿಧ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು. ನಿರ್ಲಕ್ಷ್ಯ ವಹಿಸಿದರೆ ವಲಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಲಿದೆ ಎಂದು ರಾಕೇಶ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗ್ಳೂರಿನ ಐಟಿ-ಬಿಟಿ ವಲಯದಲ್ಲೂ ರಸ್ತೆಗಳು ನೆಟ್ಟಗಿಲ್ಲ..!

ಮೊದಲ ಹಂತದಲ್ಲಿ ಬಿಬಿಎಂಪಿಯ ವ್ಯಾಪ್ತಿಯ 1,300 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವುದರೊಂದಿಗೆ ರಸ್ತೆಯ ಅಕ್ಕ-ಪಕ್ಕದ ಮಳೆ ನೀರು ಕಾಲುವೆಯ ಹೂಳು ತೆಗೆಯಬೇಕು. ಜತೆಗೆ, ಪಾದಚಾರಿ ಮಾರ್ಗವನ್ನು ಸ್ವಚ್ಛವಾಗಿಡಬೇಕೆಂದು ನಿರ್ದೇಶಿಸಿದ್ದಾರೆ.

ರಸ್ತೆ ಗುಂಡಿ ಸಂಖ್ಯೆ 31 ಸಾವಿರಕ್ಕೇರಿಕೆ

ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಒಂದು ವಾರದ ಅಂತರದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹೊಸ ಗುಂಡಿ ಪತ್ತೆಯಾಗುವ ಮೂಲಕ ಒಟ್ಟು ಗುಂಡಿ ಸಂಖ್ಯೆ 31 ಸಾವಿರಕ್ಕೆ ಏರಿಕೆಯಾಗಿದೆ. ಕಳೆದ ನ.27ಕ್ಕೆ 25 ಸಾವಿರಕ್ಕೂ ಅಧಿಕ ಗುಂಡಿ ಪತ್ತೆ ಆಗಿದ್ದವು. ನ.4ರ ವೇಳೆಗೆ 31 ಸಾವಿರಕ್ಕೆ ಏರಿಕೆಯಾಗಿವೆ.

98% ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ ಎಂದ ಬಿಬಿಎಂಪಿ: ನಿಮಗೆ ನೀವೆ ಸರ್ಟಿಫಿಕೇಟ್‌ ಕೊಡ್ಕೊಂಡ್ರೆ ಹೆಂಗೆ?; ಕೋರ್ಟ್‌ ಪ್ರಶ್ನೆ

‘ಕನ್ನಡಪ್ರಭ’ ನಿರಂತರ ವರದಿ

ನಗರದಲ್ಲಿನ ರಸ್ತೆಗುಂಡಿಗಳ ಬಗ್ಗೆ ಕನ್ನಡಪ್ರಭ ಕಳೆದ 15 ದಿನದಿಂದ ನಿರಂತರವಾಗಿ ವರದಿ ಮಾಡಿತ್ತು. ವಾರ್ಡ್‌ಗಳಲ್ಲಿ ಅತ್ಯಧಿಕ ಗುಂಡಿ ಇರುವ ರಸ್ತೆಗಳ ಬಗ್ಗೆ ವರದಿ ಪ್ರಕಟಿಸಿದ ಬಳಿಕ ವಲಯ ಮಟ್ಟದಲ್ಲೂ ರಸ್ತೆಗಳ ಅವ್ಯವಸ್ಥೆ ಬಗ್ಗೆ ಗಮನ ಸೆಳೆದಿತ್ತು. ಬಿಬಿಎಂಪಿಯ ಬೇಜವಾಬ್ದಾರಿ, ಸರ್ಕಾರದ ನಿರ್ಲಕ್ಷ್ಯದ ಬಗೆಗಿನ ಸಾರ್ವಜನಿಕರ ಆಕ್ರೋಶಕ್ಕೆ ಕನ್ನಡಪ್ರಭ ವೇದಿಕೆಯಾಗಿತ್ತು.

ನಗರದ ರಸ್ತೆ ಗುಂಡಿ ವಿವರ

ವಲಯ ಗುಂಡಿ ಸಂಖ್ಯೆ ಮುಚ್ಚಿದ ಗುಂಡಿ ಬಾಕಿ ಗುಂಡಿ
ಬೊಮ್ಮನಹಳ್ಳಿ 1,409 1,396 13
ದಾಸರಹಳ್ಳಿ 1,918 636 1,282
ಪೂರ್ವ 5,776 5,364 412
ಮಹದೇವಪುರ 2,004 1,762 242
ರಾಜರಾಜೇಶ್ವರಿನಗರ 3,196 2,677 519
ದಕ್ಷಿಣ 1,915 1,684 231
ಯಲಹಂಕ 1,015 699 316
ರಸ್ತೆ ಮೂಲಸೌಕರ್ಯ 3,233 3,042 191
ಪೈಥಾನ್‌ 5,765 2,011 3,754
ಒಟ್ಟು 31,211 23,957 7,254
 

Follow Us:
Download App:
  • android
  • ios