ಹವಾಮಾನ ವೈಪರೀತ್ಯ ಪರಿಣಾಮ ಕೊಡಗು ಜಿಲ್ಲೆಯಲ್ಲಿ ಅವಧಿಗೂ ಮುಂಚೆಯೇ ಅರೆಬಿಕಾ ಕಾಫಿ ಹಣ್ಣಾಗಿದೆ  ಕಾಫಿ ಹಣ್ಣಾಗಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಕಾಫಿ ಕೊಯ್ಲು ಆರಂಭ

ವರದಿ : ವಿಘ್ನೇಶ್‌ ಎಂ ಭೂತನಕಾಡು

ಮಡಿಕೇರಿ (ಸೆ.22):  ಹವಾಮಾನ ವೈಪರೀತ್ಯ ಪರಿಣಾಮ ಕೊಡಗು ಜಿಲ್ಲೆಯಲ್ಲಿ ಅವಧಿಗೂ ಮುಂಚೆಯೇ ಅರೆಬಿಕಾ ಕಾಫಿ ಹಣ್ಣಾಗಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಕಾಫಿ ಕೊಯ್ಲು ಆರಂಭವಾಗಿದೆ.

ಸಾಮಾನ್ಯವಾಗಿ ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಆರಂಭವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈಗ ಕಾಫಿ ಹಣ್ಣಾಗುತ್ತಿದೆ. ಇದರಿಂದ ಕಾಫಿ ಬೆಳೆಗಾರರಿಗೆ ಮತ್ತಷ್ಟುಹೊರೆಯಾಗಿದೆ.

ಕಾಫಿ ಫಸಲು ಸಂಪೂರ್ಣವಾಗಿ ಹಣ್ಣಾದ ನಂತರ ಒಂದೇ ಬಾರಿ ಕೊಯ್ಲು ಮಾಡಿದರೆ ಸುಲಭವಾಗುತ್ತದೆ. ಆದರೆ ಇದೀಗ ಗಿಡದಲ್ಲಿ ಅರ್ಧದಷ್ಟುಫಸಲು ಹಣ್ಣಾಗಿದ್ದು, ಎರಡು ಮೂರು ಬಾರಿ ಕೊಯ್ಲು ಮಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಕೊಯ್ಲಿಗೆ ಹೆಚ್ಚಿನ ವೆಚ್ಚವಾಗಲಿದೆ.

ಕಾಫಿ ಫಸಲು ಕಳೆದುಕೊಂಡು ಬೆಳೆಗಾರರು ಕಂಗಾಲು!

ಹಣ್ಣಾಗಿರುವ ಕಾಫಿಯನ್ನು ಗಿಡದಲ್ಲಿ ಹಾಗೇ ಬಿಟ್ಟರೆ ಬಂದಿರುವ ಫಸಲು ನೆಲಕಚ್ಚುವ ಭೀತಿಯಿಂದಾಗಿ ಆರ್ಥಿಕವಾಗಿ ಹೊರೆಯಾದರೂ ಕಾರ್ಮಿಕರಿಂದ ಫಸಲನ್ನು ಕೊಯ್ಲು ಮಾಡಿಸಿ ಒಣಗಿಸುವ ಪ್ರಕ್ರಿಯೆಯಲ್ಲಿ ಕೆಲವು ಬೆಳೆಗಾರರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅರೆಬಿಕಾ ಕಾಫಿ ಬೆಳೆಯಲಾಗುತ್ತದೆ. ಇದೀಗ ಜಿಲ್ಲೆಯ ಸೋಮವಾರಪೇಟೆ, ಸುಂಟಿಕೊಪ್ಪ, ಮಾದಾಪುರ, ಸಿದ್ದಾಪುರ ಸೇರಿ ಕೆಲವು ಕಡೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಫಿ ಹಣ್ಣಾಗಿದ್ದು, ಕೊಯ್ಲು ಕೂಡ ಶುರು ಮಾಡಲಾಗಿದೆ.

ಬೆಳೆಗಾರರಿಗೆ ಹಲವು ಸಮಸ್ಯೆ: ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಬೆಲೆ ಕೊರತೆ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಳೆಗಾರರಿಗೆ ಈಗ ಅವಧಿಗೆ ಮುಂಚೆಯೇ ಕಾಫಿ ಹಣ್ಣಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜನವರಿ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಈಗ ಅರೆಬಿಕಾ ಕಾಫಿಗಳು ಹಣ್ಣಾಗುತ್ತಿದ್ದು, ನಮ್ಮ ತೋಟದಲ್ಲಿ ಈಗಾಗಲೇ ಕೊಯ್ಲು ಆರಂಭಿಸಿದ್ದೇವೆ. ಹವಾಮಾನ ವೈಪರೀತ್ಯ ಪರಿಣಾಮ ಒಂದೇ ಗಿಡದಲ್ಲಿ ಎರಡು ಮೂರು ಬಾರಿ ತೋಟದಲ್ಲಿ ಕಾಫಿ ಕೊಯ್ಲು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ

- ಅಪ್ಪಯ್ಯ, ಬೆಳೆಗಾರ ಸಿದ್ದಾಪುರ