ಚಿತ್ರದುರ್ಗ: ಅವೈಜ್ಞಾನಿಕ ಡಿವೈಡರ್‌ಗಳಿಗೆ ಕೊನೆಗೂ ಸಿಕ್ತು ಮುಕ್ತಿ..!
ಚಿತ್ರದುರ್ಗ ನಗರದಲ್ಲಿ ನಿರ್ಮಿಸಿದ್ದ ಅವೈಜ್ಞಾನಿಕ ಡಿವೈಡರ್ ಸದ್ದು ಎಲ್ಲೆಡೆ ಸದ್ದು ಮಾಡಿತ್ತು. ಆದ್ರೆ ಡಿವೈಡರ್ ಇಂದು ತೆರವುಗೊಳಿಸಿ ಸಾರ್ವಜನಿಕ ಅನುಕೂಲಕ್ಕೆ ಅನುವು ಮಾಡಿಕೊಟ್ಟಿರೋ ಕೆಲಸಕ್ಕೆ ಕ್ಷೇತ್ರದ ಜನರೆಲ್ಲರೂ ಸಲಾಂ ಎನ್ನುತ್ತಿದ್ದಾರೆ.
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಫೆ.10): ಕೋಟೆನಾಡಿನಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಾಣದಿಂದಾಗಿ ಕಳೆದೊಂದು ವರ್ಷದಿಂದಲೂ ಜನರು ವಾಹನದಲ್ಲಿ ಸಂಚರಿಸೋಕೆ ಹರಸಾಹಸ ಪಡ್ತಿದ್ರು. ಕೆಲವಡೆ ಒನವೇ ಗಳಲ್ಲಿ ನಿರ್ಮಿಸಿದ ಪರಿಣಾಮ ಜನರು ಹೈರಾಣಾಗಿದ್ರು. ಇಂದು ಅವೈಜ್ಞಾನಿಕ ಡಿವೈಡರ್ ಗಳ ತೆರವು ಕಾರ್ಯಾಚರಣೆ ಶುರುವಾಗಿದ್ದು ಜನರು ಫುಲ್ ಖುಷಿಯಾಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ.
ಹೀಗೆ ರಾತ್ರೋ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಸದ್ದು ಮಾಡ್ತಿರೋ ಜೆಸಿಬಿಗಳು. ತಾವೇ ಸ್ವತಃ ನಿಂತು ಕೆಲಸ ಮಾಡಿಸ್ತಿರೋ ಶಾಸಕರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ. ಹೌದು, ಕಳೆದೊಂದು ವರ್ಷದಿಂದಲೂ ಕೋಟೆನಾಡಿನಲ್ಲಿ ಅವೈಜ್ಞಾನಿಕ ಡಿವೈಡರ್ ಗಳ ಹಾವಳಿಗೆ ಜನರು ಬೇಸತ್ತು ಹೋಗಿದ್ದರು. ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿಯ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ತಮ್ಮ ಅವಧಿಯಲ್ಲಿ ನಗರದಲ್ಲಿ ಇರುವ ಪ್ರಮುಖ ರಸ್ತೆಗಳಲ್ಲಿ ಡಿವೈಡರ್ ಗಳನ್ನು ನಿರ್ಮಾಣ ಮಾಡಿದ್ರು. ಆದ್ರೆ ಬಹುತೇಕ ಕಡೆ ಅವೈಜ್ಞಾನಿಕವಾಗಿ ನಿರ್ಮಿಸಿದ ಕಾರಣ ನಿತ್ಯ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಮೊದಲು ಕ್ಷೇತ್ರದ ಜನರಿಗೆ ಹೇಳಿದ್ದೇ, ಅವೈಜ್ಞಾನಿಕ ಡಿವೈಡರ್ ಗಳನ್ನ ತೆರವುಗೊಳಿಸ್ತೀನಿ ಎಂದು ಜನರಿಗೆ ಭರವಸೆ ಕೊಟ್ಟಿದ್ದರು. ಅದರನ್ವಯ ಸದನದಲ್ಲಿಯೇ ಡಿವೈಡರ್ ತೆರವುಗೊಳಿಸಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದನ್ನ ಪರಿಗಣನೆಗೆ ತೆಗೆದುಕೊಂಡ ಸರ್ಕಾರ ಶಾಸಕರ ಒತ್ತಾಯಕ್ಕೆ ಮಣಿದು, ಇಂದು ನಗರದಲ್ಲಿ ಇರುವ ಅವೈಜ್ಞಾನಿಕ ಡಿವೈಡರ್ ತೆರವುಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಚಿತ್ರದುರ್ಗ ಶಾಸಕ ಕೆ.ಸಿ. ವಿರೇಂದ್ರ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್‌ನೊಳಗೆ ವೆಡ್ಡಿಂಗ್ ಫೋಟೋಶೂಟ್ ಮಾಡ್ಕೊಂಡ ಡಾಕ್ಟರ್!
ಈ ಹಿಂದೆಯೇ ಜನರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದ್ರೆ PWD ಅಧಿಕಾರಿಗಳು ಮಾತ್ರ ಹಿಂದಿನ ಶಾಸಕರ ಸೂಚನೆ ಮೇರೆಗೆ ಕೆಲಸ ಮಾಡಿದ್ದರು. ಇಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಡಿವೈಡರ್ ತೆರವಿಗೂ ಹಣ ಖರ್ಚಾಗ್ತಿರೋದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುವುದಿಲ್ಲವೇ ಎಂದು ಅಧಿಕಾರಿಯನ್ನೇ ಪ್ರಶ್ನಿಸಿದ್ರೆ, ಈ ಹಿಂದೆ ನಿರ್ಮಿಸಿರೋರು ಆ ಸಂದರ್ಭಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದರು. ಆದ್ರೆ ಸರ್ಕಾರ ಈಗ ಆರು ಕಡೆ ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದರು. ಅದರಂತೆ ಕೆಲಸ ಮಾಡಿದ್ದರು, ಈ ಹಿಂದೆ ಕೆಲಸ ಮಾಡಿದವರೇ ಇಂದು ತೆರವು ಕಾರ್ಯ ಮಾಡ್ತಿದ್ದಾರೆ. ಈ ಹಿಂದೆ ನಡೆದಿರೋ ಕಾಮಗಾರಿಗೆ ಇನ್ನೂ ಬಿಲ್ ಪಾವತಿ ಮಾಡಿಲ್ಲ. ಇದು ಅವರ ಕೆಲಸಕ್ಕೆ ಸೇರಿಲದೆ. ಹಾಗಾಗಿ ಸರ್ಕಾರಕ್ಕೆ ಇದ್ರಿಂದ ಯಾವುದೇ ಬೊಕ್ಕಸಕ್ಕೆ ನಷ್ಟ ಆಗುವುದಿಲ್ಲ ಎಂದು ಚಿತ್ರದುರ್ಗ AEE PWD ಇಲಾಖೆ ಚಂದ್ರಪ್ಪ ಹಾರಿಕೆಯ ಉತ್ತರ ಕೊಟ್ಟರು.
ಒಟ್ಟಾರೆಯಾಗಿ ಚಿತ್ರದುರ್ಗ ನಗರದಲ್ಲಿ ನಿರ್ಮಿಸಿದ್ದ ಅವೈಜ್ಞಾನಿಕ ಡಿವೈಡರ್ ಸದ್ದು ಎಲ್ಲೆಡೆ ಸದ್ದು ಮಾಡಿತ್ತು. ಆದ್ರೆ ಡಿವೈಡರ್ ಇಂದು ತೆರವುಗೊಳಿಸಿ ಸಾರ್ವಜನಿಕ ಅನುಕೂಲಕ್ಕೆ ಅನುವು ಮಾಡಿಕೊಟ್ಟಿರೋ ಕೆಲಸಕ್ಕೆ ಕ್ಷೇತ್ರದ ಜನರೆಲ್ಲರೂ ಸಲಾಂ ಎನ್ನುತ್ತಿದ್ದಾರೆ.