ಗದಗ (ಅ.18):  ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಸಂಬಂಧಿಸಿ ಬೆಳಗಾವಿ ಬಳಿಕ ಇದೀಗ ಗದಗದಲ್ಲಿಯೂ ಸಂಘರ್ಷಕ್ಕೆ ಕಾರಣವಾಗಿದೆ.

ರಾತ್ರೋರಾತ್ರಿ ಕೆಲವರು ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಘಟನೆ ಗದಗ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಬೆನ್ನಲ್ಲೇ ಅಧಿಕಾರಿಗಳು ಈ ಮೂರ್ತಿ ತೆರವುಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು, ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಪೊಲೀಸ್‌ ವಾಹನದ ಮೇಲೆ ಕಲ್ಲುತೂರಿದ್ದು, ಹಲವರನ್ನು ಬಂಧಿಸಲಾಗಿದೆ.

ಒಂದು ಸಮುದಾಯದವರು ಕಾನೂನುಬಾಹಿರವಾಗಿ ಗ್ರಾಪಂ ಸನಿಹದಲ್ಲೇ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದನ್ನು ಅದೇ ಗ್ರಾಮದ ಇನ್ನೊಂದು ಸಮುದಾಯದ ಜನ ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ರೋಣ: ಭೀಕರ ಮಳೆ, ಮಣ್ಣಿನ ಮನೆ ಮುಂಭಾಗ ಕುಸಿದು ವೃದ್ಧೆ ಸಾವು .

ಮೂರ್ತಿ ತೆರವು:  ಸರ್ಕಾರದ ನಿಯಮ ಗಾಳಿ ತೂರಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಆರೋಪ ಕೇಳಿಬರುತ್ತಿದ್ದು, ಕಾನೂನುಬಾಹಿರ ಮೂರ್ತಿಯನ್ನು ತೆರವು ಮಾಡುವಂತೆ ಒತ್ತಾಯಿಸಿದ್ದು, ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ಮೂರ್ತಿ ತೆರವು ಮಾಡಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ಮುಂದುವರಿದಿದೆ.

ಕಲ್ಲು ತೂರಾಟ, ಲಾಟಿ ಪ್ರಹಾರ:  ಮೂರ್ತಿ ತೆರವು ಮಾಡಿದ ಹಿನ್ನೆಲೆಯಲ್ಲಿ ರಾಯಣ್ಣ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಇದೇ ವೇಳೆ ಕೆಲ ಕಿಡಿಗೇಡಿಗಳು ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಡಿವೈಎಸ್ಪಿ ಪ್ರಹ್ಲಾದ್‌ ಅವರ ವಾಹನಕ್ಕೆ ಕಲ್ಲು ತೂರಿ ವಾಹನ ಧ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಎರಡು ಸಮುದಾಯದ ಹಲವು ಮಂದಿಯನ್ನು ಬಂಧಿಸಲಾಗಿದೆ.

ಮುಸುಕಿನ ಗುದ್ದಾಟ:  ಗ್ರಾಮದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಹಾಲುಮತ ಕುರುಬ ಸಮಾಜದವರು ಪಟ್ಟು ಹಿಡಿದರೆ, ಅದೇ ಜಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಪಂಚಮಸಾಲಿ ಸಮುದಾಯವರು ಒತ್ತಾಯಿಸಿದ್ದರು. ಹಿಂದೆ ರಾಣಿ ಚೆನ್ನಮ್ಮ ನಾಮಫಲಕವನ್ನೂ ತೆರವುಗೊಳಿಸಲಾಗಿತ್ತು.