ಗೆಸ್ಟ್‌ಹೌಸ್‌ ವಿಷಯಕ್ಕೆ ಎಚ್‌ಡಿಕೆ - ಜಮೀರ್‌ ಗಲಾಟೆ

  • ಗೆಸ್ಟ್ ಹೌಸ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ
  • ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ-ಜಮೀರ್ ಬೆಂಬಲಿಗರ ಗಲಭೆ
  • ನನಗೆ ಸೇರಿದ ಜಾಗ ಎಂದು ಜಮೀರ್ ಎಚ್‌ಡಿಕೆ ವಿರುದ್ಧ ಆಕ್ರೋಶ
clashes between Zameer Ahmed And HD Kumaraswamy on Guest house issue snr

ಬೆಂಗಳೂರು (ಜೂ.10): ಸದಾಶಿವನಗರ ಗೆಸ್ಟ್‌ಹೌಸ್‌ ಜಾಗಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮ್ಮದ್‌ ಹಾಗೂ ಅವರ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ಅದೂ ಜಮೀರ್‌ ಅಹ್ಮದ್‌ ಅವರು ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ಈ ಹೈಡ್ರಾಮಾ ನಡೆದಿದೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಂಗುತ್ತಿದ್ದ ಸದಾಶಿವನಗರದ ಗೆಸ್ಟ್‌ಹೌಸ್‌ ಮಾಲೀಕತ್ವದ ವಿಚಾರಕ್ಕಾಗಿ ಈ ಜಟಾಪಟಿ ನಡೆದಿದೆ. ಈ ಗೆಸ್ಟ್‌ಹೌಸ್‌ ಅನ್ನು ಜಮೀರ್‌ ಇತ್ತೀಚೆಗೆ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಮಂಗಳವಾರ ಗೆಸ್ಟ್‌ ಹೌಸ್‌ ಬಳಿ ಕುಮಾರಸ್ವಾಮಿ ಪುತ್ರ ನಿಖಿಲ್  ಗನ್‌ಮ್ಯಾನ್‌ ಹಾಗೂ ಬೆಂಬಲಿಗರು ತೆರಳಿದ್ದಾರೆ. ಈ ವೇಳೆ ಜಮೀರ್‌ ಬೆಂಬಲಿಗರು ಕೂಡ ಗೆಸ್ಟ್‌ ಹೌಸ್‌ ಬಳಿ ಜಮಾವಣೆಯಾಗಿದ್ದು ಈ ಸಂದರ್ಭ ಗಲಾಟೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

'ಎಚ್‌ಡಿಕೆ ಅಧಿಕಾರಕ್ಕಾಗಿ ಯಾರ​ ಕಾಲು ಬೇಕಾದ್ರೂ ಹಿಡಿತಾರೆ, ದೇವೇಗೌಡ್ರು ಹಾಗಲ್ಲ'

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ನಾಲ್ಕೈದು ವರ್ಷದಿಂದ ನಾನು ಗೆಸ್ಟ್‌ ಹೌಸ್‌ಗೆ ಹೋಗಿಲ್ಲ. ಜಮೀರ್‌ ಬೆಂಬಲಿಗರು ಹೋಗಿ ಬೀಗ ಹಾಕಿಕೊಂಡು ಬಂದಿದ್ದಾರೆ. ಅದರ ಅವಶ್ಯಕತೆ ಇರಲಿಲ್ಲ. ಸಿನಿಮಾ ಹುಡುಗರ ಸಾಮಗ್ರಿಗಳು ಅಲ್ಲಿದ್ದವು. ಸಾಮಗ್ರಿ ತೆಗೆದುಕೊಂಡು ಹೋಗಲು ಸಿಬ್ಬಂದಿಗೆ ಹೇಳಿದ್ದೆ. ಹೋಗಿರಬೇಕು. ಗಲಾಟೆ ಮಾಡುವ ಉದ್ದೇಶ ನನಗಿಲ್ಲ. ನನ್ನ ತೋಟದಲ್ಲಿ ನಾನು ಇದ್ದೇನೆ. ಯಾರೂ ದರೋಡೆ ಮಾಡಲು ಹೋಗಿರಲಿಲ್ಲ ಎಂದು ಹೇಳಿದ್ದಾರೆ.

ಜಮೀರ್‌ ಅಹಮ್ಮದ್‌ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಕಡೆಯವರು ಗೆಸ್ಟ್‌ಹೌಸ್‌ಗೆ ದಾಳಿ ಮಾಡಿದ್ದಾರೆ. ಅದು ನನ್ನ ಜಾಗ ಅಲ್ಲಿಗೆ ಬಂದು ಗಲಾಟೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಬೇರೆಯವರಿಗೆ ಸೇರಿದ ಗೆಸ್ಟ್‌ ಹೌಸ್‌ ಬಳಿ ಹೋಗಿ ಗಲಾಟೆ ಮಾಡಬಾರದು ಎಂಬ ಜ್ಞಾನ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ವಿರುದ್ಧ ನಾನು ಹೇಳಿಕೆ ನೀಡಿದ್ದಕ್ಕೆ ನನ್ನ ಆಸ್ತಿ ಕಬಳಿಸಲು ಜನರನ್ನು ಕಳಿಸಿದ್ದಾರೆ. ಹೀಗಾಗಿ ಗಲಾಟೆ ನಡೆದಿದೆ. ಅನಂತರ ಕುಮಾರಸ್ವಾಮಿ ಅವರ ಆಪ್ತ ಬೋಜೇಗೌಡರು ಕುಮಾರಸ್ವಾಮಿ ಪರ ಕ್ಷಮೆ ಕೋರುವುದಾಗಿ ಹೇಳಿದ್ದಾರೆ. ದೇವರೇ ಕ್ಷಮಿಸುತ್ತಾನೆ. ನಾನೂ ಕ್ಷಮಿಸಿದ್ದೇನೆ. ಪೊಲೀಸ್‌ ಠಾಣೆಗೆ ದೂರು ನೀಡುವುದಿಲ್ಲ. ಅವರ ಸಾಮಗ್ರಿಗಳನ್ನು ತೆಗೆದುಕೊಂಡು ನನ್ನ ಆಸ್ತಿ ನನಗೆ ಬಿಟ್ಟುಕೊಡಬೇಕು. ಜೀವನ ಮಾಡಲು ಜಾಗ ಇಲ್ಲ ಕೊಡಿ ಅಂದಿದ್ದರೆ ಕೊಡುತ್ತಿದ್ದೆ. ಯುಬಿ ಸಿಟಿಯಲ್ಲಿ ಇದ್ದಾಗಲೂ ನಾನೇ ಜಾಗ ಕೊಟ್ಟಿದ್ದು. ಅದು ಕೂಡ ನನ್ನ ಆಸ್ತಿಯೇ ಎಂದು ಜಮೀರ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios