ಮಂಡ್ಯ (ನ.09):  ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಚುನಾವಣೆ ಮುಗಿದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಆರಂಭವಾಗಿದ್ದು, ಬಹುಮತ ಪಡೆದಿರುವ ಕಾಂಗ್ರೆಸ್‌ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿದ್ದರೆ, ಬಿಜೆಪಿ ಜೊತೆಗೂಡಿ ಜೆಡಿಎಸ್‌ ಕೂಡ ಅಧಿಪತ್ಯ ಸ್ಥಾಪಿಸುವ ಸಾಹಸಕ್ಕೆ ಕೈ ಹಾಕಿದೆ.

ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್‌ನ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಗರು 8, ಜೆಡಿಎಸ್‌ ಬೆಂಬಲಿಗರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್‌ ಸುಲಭವಾಗಿ ಅಧಿಕಾರ ಹಿಡಿಯುವ ಸ್ಪಷ್ಟಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು ಅಧ್ಯಕ್ಷ ಸ್ಥಾನದ ಲಾಭಿಗೆ ಮುಂದಾಗಿದ್ದಾರೆ.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಪ್ರಮುಖ ಮತ್ತು ಪ್ರಬಲ ಆಕಾಂಕ್ಷಿಯಾಗಿರುವ ಸಿ. ಅಶ್ವಥ್‌ ಈಗಾಗಲೇ ಸ್ಥಳೀಯ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿ ಅಭಿನಂದಿಸುವುದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೂ ಕೂಡ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಹಿಂದಿನ ಅವಧಿಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಸಿ.ಅಶ್ವಥ್‌ ಅಧ್ಯಕ್ಷರಾಗಿಯೂ ಅಧಿಕಾರ ಅನುಭವಿಸಿದ್ದು, ಮತ್ತೊಂದು ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

'ಎಲ್ಲವೂ ಉಲ್ಟಾಪಲ್ಟಾ : ಎರಡೂ ಕಡೆ ಕೈ ಗೆಲುವು ಖಚಿತ' ...

ಮೂಲ ಕಾಂಗ್ರೆಸ್ಸಿಗರಾದ ಸಿ.ಅಶ್ವಥ್‌ ಚುನಾವಣಾ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದ ಮೇರೆಗೆ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆಗೆ ಮುಂದಾದರೂ ಸ್ಥಳೀಯ ಕಾಂಗ್ರೆಸ್‌ ನಾಯಕರು ಸಿ.ಅಶ್ವಥ್‌ ಅವರಿಗೆ ಸಹಮತವನ್ನು ವ್ಯಕ್ತಪಡಿಸದೆ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷರಾಗಿದ್ದ ಸಾತನೂರು ಸತೀಶ್‌ ಅವರ ಬೆಂಬಲಕ್ಕೆ ನಿಂತಿದ್ದು ವಿಶೇಷವಾಗಿತ್ತು.

ಸ್ಥಳೀಯ ಕೆಲವು ಕಾಂಗ್ರೆಸ್‌ ನಾಯಕರ ವಿರೋಧದ ನಡುವೆಯೂ ಅಮರಾವತಿ ಅಶ್ವಥ್‌ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದು ಮತ್ತೊಮ್ಮೆ ಅಧ್ಯಕ್ಷರಾಗಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ನಾಯಕರನ್ನು ಅಭಿನಂದಿಸುವುದರ ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಅಭಿನಂದಿಸುವ ಮೂಲಕ ಜೆಡಿಎಸ್‌ ಬೆಂಬಲಿತ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಅಲ್ಲದೇ, 2019ರ ಲೋಕಸಭಾ ಚುನಾವಣಾ ಸಂದರ್ಭದಿಂದಲೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಡನೆ ಉತ್ತಮ ರಾಜಕೀಯ ಬಾಂಧವ್ಯ ಹೊಂದಿರುವ ಅಶ್ವಥ್‌ ಅವರು ಈ ಸಾಲಿನ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಜೆಡಿಎಸ್‌ ತನ್ನ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ನೇರವಾಗಿ ಸಿ.ಅಶ್ವಥ್‌ ಅವರನ್ನು ಬೆಂಬಲಿಸಿದೆ.

ಜೆಡಿಎಸ್‌ ಮತಗಳಿಂದಲೇ ಬಹುತೇಕ ಗೆಲುವು ಸಾಧಿಸಿರುವ ಸಿ.ಅಶ್ವಥ್‌ ಈಗ ನಾಲ್ವರು ಜೆಡಿಎಸ್‌ ನಿರ್ದೇಶಕರನ್ನು ಜೊತೆಗೂಡಿಸಿಕೊಂಡೇ ಅಧ್ಯಕ್ಷರಾಗುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದ್ದರಿಂದ ಜೆಡಿಎಸ್‌ ವರಿಷ್ಠರ ಬೆಂಬಲವನ್ನು ಕೇಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಸಿ.ಅಶ್ವಥ್‌ ಅವರನ್ನು ಈ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿರುವ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಬಣ ಕಾಂಗ್ರೆಸ್‌ನಿಂದ ಅಶ್ವಥ್‌ ಅವರನ್ನು ಹೊರತುಪಡಿಸಿ ಬೇರೊಬ್ಬರನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಮಂಡ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಎನ್‌. ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ ಅವರು ತಮ್ಮದೇ ಗುಂಪಿನ ನಿರ್ದೇಶಕರೊಬ್ಬರಿಗೆ ಪಟ್ಟಕಟ್ಟಲು ಮುಂದಾಗಿದ್ದಾರೆ.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆಯಲ್ಲಿ 7 ಮಂದಿ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರೆಲ್ಲರೂ ಚಲುವರಾಯಸ್ವಾಮಿ ಬೆಂಬಲಿಗರಾಗಿದ್ದು, ಅವರೆಲ್ಲರನ್ನೂ ಒಗ್ಗೂಡಿಸಿ ಡಿಸಿಸಿ ಬ್ಯಾಂಕ್‌ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತೀರಾ ಅಗತ್ಯಬಿದ್ದರೆ ಬಿಜೆಪಿ ಬೆಂಬಲವನ್ನೂ ಪಡೆದು ಬಿಜೆಪಿ ನಾಮ ನಿರ್ದೇಶಿತ ನಿರ್ದೇಶಕರನ್ನು ಉಪಾಧ್ಯಕ್ಷರನ್ನಾಗಿ ಮಾಡಿಯಾದರೂ ಜೆಡಿಎಸ್‌ ಸಂಪರ್ಕದಲ್ಲಿರುವ ಅಶ್ವಥ್‌ ಅವರನ್ನು ಅಧಿಕಾರದಿಂದ ದೂರವಿಡುವ ಲೆಕ್ಕಾಚಾರವಿದೆ ಎಂದು ತಿಳಿದುಬಂದಿದೆ.

ಈ ರಾಜಕೀಯ ಬೆಳವಣಿಗೆಯನ್ನು ಗ್ರಹಿಸಿರುವ ಸಿ.ಅಶ್ವಥ್‌ ಜೆಡಿಎಸ್‌ ಮತ್ತು ಬಿಜೆಪಿಯ ಮಿತೃತ್ವವನ್ನು ಸೃಷ್ಟಿಸಿ ಆ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ಆರಂಭಿಸಿದ್ದು, ಸಾಧ್ಯವಾದರೆ ಕಾಂಗ್ರೆಸ್‌ನ ಒಂದಿಬ್ಬರು ನಿರ್ದೇಶಕರನ್ನು ಸೆಳೆಯಲು ಹೊಂಚು ಹಾಕುತ್ತಿದ್ದಾರೆ.

ಒಟ್ಟಾರೆ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಚುನಾವಣೆ ಬಳಿಕ ಮೇಲುಗೈ ಸಾಧಿಸಿರುವ ಕಾಂಗ್ರೆಸ್‌ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಲಾಭಿ ಏರ್ಪಟ್ಟಿದ್ದು, ಇದನ್ನು ಜೆಡಿಎಸ್‌ ಮತ್ತು ಬಿಜೆಪಿ ಹೇಗೆ ಲಾಭದಾಯಕವಾಗಿ ಬಳಸಿಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.