ಕಾರವಾರ: ಸಚಿವರೆದುರೇ ಬಿಜೆಪಿ- ಕಾಂಗ್ರೆಸ್ ಮುಖಂಡರ ವಾಗ್ವಾದ..!
ಮೀನು ಮಾರಾಟಗಾರರ ಹೊಸ ಕಟ್ಟಡದಲ್ಲಿ ಅವಕಾಶ ನೀಡುವ ಕುರಿತು ವಿವಾದ| ಹಾಲಿ 150 ವ್ಯಾಪಾರಸ್ಥರು ಕುಳಿತುಕೊಳ್ಳಿ, ಉಳಿದ ಕಟ್ಟಡ ಶೀಘ್ರದಲ್ಲಿ ಪೂರ್ಣಗೊಳಿಸಿ ಎಲ್ಲರಿಗೂ ಕುಳಿತುಕೊಳ್ಳಲು ಅವಕಾಶ|
ಕಾರವಾರ(ಆ.12):ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಆಗಮಿಸಿದ್ದ ವೇಳೆ ಕಾಂಗ್ರೆಸ್ ಬಿಜೆಪಿ ಮುಖಂಡರ ನಡುವೆ ಅವರೆದುರಲ್ಲೇ ವಾಗ್ವಾದ ನಡೆದಿದೆ
ಕಾಂಗ್ರೆಸ್ ಮುಖಂಡರು ಸಚಿವರ ಬಳಿಗೆ ಬಂದು ಎಲ್ಲ ಮೀನು ಮಾರಾಟಗಾರ ಮಹಿಳೆಯರಿಗೆ ಹೊಸ ಕಟ್ಟಡದಲ್ಲಿ ಅವಕಾಶ ನೀಡಬೇಕು. ಕೆಲವೇ ಜನರಿಗೆ ಅವಕಾಶ ನೀಡಿದರೆ ಗೊಂದಲ ಉಂಟಾಗುತ್ತದೆ. ವೈಮನಸ್ಸಿಗೆ ಕಾರಣವಾಗುತ್ತದೆ ಎಂದು ಮನವಿ ಮಾಡಿದರು.
ಈ ವೇಳೆ ಮುಖಂಡರೊಂಡಿಗೆ ಮಾತನಾಡಿದ ಹೆಬ್ಬಾರ, ಕಟ್ಟಡ ನೀಲನಕ್ಷೆಯಂತೆ ಪೂರ್ಣವಾಗಿಲ್ಲ. ಅರ್ಧ ಜಾಗದಲ್ಲಿ ಮಾತ್ರ ಪೂರ್ಣಗೊಂಡಿದ್ದು, ಉಳಿದ ಅರ್ಧ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಇರುವುದರಿಂದ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ. 9 ಅಂಗಡಿ ಮಾಲೀಕರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರ ಮನವೊಲಿಸುವ ಕೆಲಸ ಕೂಡಾ ನಡೆಯುತ್ತಿದೆ. ಸ್ವಲ್ಪ ದಿನ ಸಹಕಾರ ನೀಡಿ ಎಂದು ಕೋರಿದರು.
ಲಾಡ್ಜ್‌ನಲ್ಲಿ ಕೂಡಿ ಹಾಕಿ ಬಾಲಕಿಯ ಅತ್ಯಾಚಾರ: ಆರೋಪಿಗೆ 12 ವರ್ಷ ಜೈಲು
ಹಾಲಿ 150 ವ್ಯಾಪಾರಸ್ಥರು ಕುಳಿತುಕೊಳ್ಳಿ, ಉಳಿದ ಕಟ್ಟಡ ಶೀಘ್ರದಲ್ಲಿ ಪೂರ್ಣಗೊಳಿಸಿ ಎಲ್ಲರಿಗೂ ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಆದರೆ ಕಾಂಗ್ರೆಸ್ ಮುಖಂಡರು ಎಲ್ಲರಿಗೂ ಮೀನು ಮಾರಾಟಕ್ಕೆ ಕುಳಿತುಕೊಳ್ಳಲು ಅವಕಾಶ ದೊರೆತ ಬಳಿಕವೇ ಉದ್ಘಾಟನೆ ಮಾಡಬೇಕು. ಈಗಲೇ ಉದ್ಘಾಟನೆಯಾದಲ್ಲಿ ಗೊಂದಲ ಆಗುತ್ತದೆ ಎಂದರು.
ಈ ವೇಳೆ ಬಿಜೆಪಿ ಮುಖಂಡ ಗಣಪತಿ ಉಳ್ವೇಕರ, ಈ ಹಿಂದೆ ಸತೀಶ ಸೈಲ್ ಶಾಸಕರಿದ್ದಾಗಲೇ ಹಳೆ ಕಟ್ಟಡ ಕೆಡವಿ ನಿರ್ಮಾಣ ಯೋಜನೆ ಸಿದ್ಧವಾಗಿತ್ತು. ಆಗಲೇ ತಕರಾರು ಬಂದಿದೆ. ಬಗೆಹರಿಸುವ ಬದಲು ಇಷ್ಟುದೊಡ್ಡದಾಗಲು ಏಕೆ ಬಿಟ್ಟಿದ್ದು ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಹೀಗಾಗಿ ಕಾಂಗ್ರೆಸ್ ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆಯಿತು. ಸಚಿವ ಶಿವರಾಮ ಹೆಬ್ಬಾರ ಎಲ್ಲರನ್ನೂ ಸಮಾಧಾನಪಡಿಸಿದರು. ಕಾಂಗ್ರೆಸ್ ಮುಖಂಡ ರಾಜು ತಾಂಡೇಲ್, ಚೇತನ ಹರಿಕಂತ್ರ, ರಾಜೇಶ ಮಾಜಾಳಿಕರ ಮೊದಲಾದವರು ಇದ್ದರು.
ಮುಖಂಡರ ಮಾತುಕತೆ...
ಜಿಲ್ಲಾಧಿಕಾರಿ ಕೊಠಡಿ ಒಳಗೆ ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಮೊದಲಾದವರು ಮಾತ್ರ ಬಂದರು ವಿಸ್ತರಣೆ, ಮೀನು ಮಾರುಕಟ್ಟೆ ಬಗ್ಗೆ ಮಾತುಕತೆ ನಡೆಸಿದರು. ಅ. 15ರಂದು ನಗರದಲ್ಲಿ ನಿರ್ಮಾಣವಾದ ಹೊಸ ಮೀನು ಮಾರುಕಟ್ಟೆ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಸಚಿವರಾಗಲಿ, ಜಿಲ್ಲಾಡಳಿತವಾಗಲಿ ಸ್ಪಷ್ಟನೆ ನೀಡಿಲ್ಲ.