ಕಾರವಾರ(ಆ.01): ಲಾಡ್ಜ್‌ನಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ಭಟ್ಕಳ ತಾಲೂಕಿನ ಗುಳ್ಮೇಯ ನಿವಾಸಿ ಆರೋಪಿ ಮಹ್ಮದ್‌ ಅಲ್ತಾಫ್‌(ಆರ್ಮರ್‌ ನಜೀರ್‌ ಅಹ್ಮದ್‌ ಖಾನ್‌) ಈತನಿಗೆ ಎಫ್‌ಟಿಎಸ್‌ಸಿ-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 12 ವರ್ಷ ಜೈಲು ಶಿಕ್ಷೆ ಹಾಗೂ .10,000 ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಭಟ್ಕಳದ ಗುಳ್ಮೆಯ ಆರೋಪಿ ಮಹ್ಮದ್‌ ಅಲ್ತಾಫ್‌ ಚಾಲಕನಾಗಿದ್ದು, ಮಾ.2, 2017 ರಂದು ಕಾರಿನಲ್ಲಿ ಬಂದು ಬಾಲಕಿಯನ್ನು ಮನೆಯಿಂದ ಅಪರಿಸಿಕೊಂಡು ಹೋಗಿ, ಹೊನ್ನಾವರ ತಾಲೂಕಿನ ಅಪ್ಸರಕೊಂಡಕ್ಕೆ ಕರೆದುಕೊಂಡು ಹೋಗಿ ಸುತ್ತಾಡಿಸಿ ರಾತ್ರಿ 11.30 ಗಂಟೆಗೆ ಮುರ್ಡೇಶ್ವರದ ಲಾಡ್ಜ್‌ನಲ್ಲಿ ಮಾ. 3, 2017 ವರೆಗೆ ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡು ವಿವಾಹವಾಗುವುದಾಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು.ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದರು.ಈ ಕುರಿತಂತೆ ಭಟ್ಕಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತು.

ಹಿರಿಯ ಕಾಂಗ್ರೆಸ್ ಮುಖಂಡರ ಭೇಟಿ, ಮಂಗಳೂರಲ್ಲಿ ಡಿಕೆಶಿ: ಇಲ್ಲಿವೆ ಫೋಟೋಸ್

ಅಂದಿನ ಸಿಪಿಐ ಗಣೇಶ ಕೆ.ಎಲ್‌. ತನಿಖೆ ಜರುಗಿಸಿ ಐಪಿಸಿ ಕಲಂ 363, 342, 366 (ಎ), 376, 506 ಐಪಿಸಿ ಹಾಗೂ ಪೋಕ್ಸೋ ಕಾಯಿದೆ-2012 ರ ಕಲಂ: 4, 6 8 ರ ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಎಫ್‌ಟಿಎಸ್‌ಸಿ-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ ಹಾಗೂ ಪೋಕ್ಸೋ ಕಾಯಿದೆ-2012 ರ ಅಡಿಯಲ್ಲಿ 12 ವರ್ಷ ಜೈಲು ಶಿಕ್ಷೆ ಹಾಗೂ .10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಜತೆಗೆ ನೋಂದ ಬಾಲಕಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಸುಭಾಷ ಪಿ. ಕೈರನ್ನ ವಾದಿಸಿದ್ದರು.