Asianet Suvarna News Asianet Suvarna News

ಕೋಲಾರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ

ಕೋಲಾರ ಜಿಲ್ಲೆಯಲ್ಲಿ ಹೊಸದಾಗಿ ನಾಗರಿಕ ವಿಮಾನ ನಿಲ್ದಾಣ ತಲೆ ಎತ್ತುವ ಸಾಧ್ಯತೆ ನಿಚ್ಚಳವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ವಾಯು ಸಂಚಾರದ ದಟ್ಟಣೆಯನ್ನು ಶಮನಗೊಳಿಸಲು ರಾಜ್ಯ ಸರ್ಕಾರ ಈ ಚಿಂತನೆ ನಡೆಸಿದೆ.

Civilian airport to be started in kolar soon
Author
Bangalore, First Published Jan 29, 2020, 12:42 PM IST
  • Facebook
  • Twitter
  • Whatsapp

ಕೋಲಾರ(ಜ.29): ಬೆಂಗಳೂರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದ ಪ್ರಮುಖ ಏರ್‌ ಪೋರ್ಟ್‌ ಆಗಿದೆ. ದಿನವೂ ದೇಶ-ವಿದೇಶಗಳ ಹತ್ತಾರು ವಿಮಾನಗಳು ಇಲ್ಲಿ ಬಂದು ಇಳಿಯುತ್ತಿವೆ. ಸಹಸ್ರಾರು ಮಂದಿ ಪ್ರಯಾಣಿಕರು ಹಾಗೂ ಸರಕು ಸರಂಜಾಮುಗಳನ್ನು ಇಲ್ಲಿಂದ ವಿವಿಧೆಡೆಗೆ ಸಾಗಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ ದಟ್ಟಣೆಯಿಂದ ನಲುಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೋಲಾರ ಜಿಲ್ಲೆಯಲ್ಲಿ ನಾಗರಿಕ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಚಿಂತನೆ ನಡೆಸಿದೆ.

ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹ

ಬೆಂಗಳೂರಿಗೆ ಅತಿ ಸಮೀಪವಿರುವ ಕೋಲಾರ ಜಿಲ್ಲೆಯಲ್ಲಿ ಹೊಸ ವಿಮಾನ ನಿಲ್ದಾಣವನ್ನು ಅಸ್ತಿತ್ವಕ್ಕೆ ತಂದರೆ ಅನುಕೂಲವಾಗುವ ಬಗ್ಗೆ ಸರ್ಕಾರವು ಗಮನ ಹರಿಸಿದೆ. ಹೊಸ ಉದ್ದೇಶಿತ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಅಗತ್ಯವಿರುವ ವಿವರವನ್ನು ರಾಜ್ಯ ಮೂಲಸೌಕರ್ಯ ಅಭಿವೃದ್ದಿ ಇಲಾಖೆಯು ಈಗಾಗಲೇ ಕೋಲಾರದ ಜಿಲ್ಲಾಡಳಿತದಿಂದ ಪಡೆದುಕೊಂಡಿದೆ.

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಹೆಜ್ಜೆ ಹಾಕಿದ ನಾಯಿಮರಿ

ಕೋಲಾರದ ಸಮೀಪ ವೀರಾಪುರ ಗ್ರಾಮದ ಬಳಿ ಈಗಾಗಲೇ ವಿಮಾನ ನಿಲ್ದಾಣವಿದೆ, ಈ ನಿಲ್ದಾಣವನ್ನು ಮಿಲಿಟರಿಗೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರ್ಮಿಸಲಾಗಿದೆ. ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಇದನ್ನು ನಿರ್ಮಿಸಲಾಗಿತ್ತು. ವಿಮಾನ ನಿಲ್ದಾಣವು ಪ್ರಸ್ತುತ ಸುಸ್ಥಿತಿಯಲ್ಲಿರುತ್ತದೆ ಎಂಬ ಮಾಹಿತಿಯನ್ನೂ ಜಿಲ್ಲಾಡಳಿತ ಸರ್ಕಾರಕ್ಕೆ ನೀಡಿದೆ.

ವಿಮಾನ ನಿಲ್ದಾಣಕ್ಕೆ ಭೂಮಿಯ ಸಮಸ್ಯೆ

ಈ ವಿಮಾನ ನಿಲ್ದಾಣ ಪ್ರಸ್ತುತ ಬೆಂಗಳೂರಿನ ಸಿ.ವಿ.ರಾಮನ್‌ ನಗರದಲ್ಲಿರುವ ರಕ್ಷಣಾ ಇಲಾಖೆಯ ಎಲೆಕ್ಟ್ರಾನಿಕ್ಸ್‌ ರೆಡಾರ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಶ್‌ಮೆಂಟ್‌(ಎಲ್‌ಆರ್‌ಡಿಇ) ನಿರ್ದೇಶಕರ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ರಕ್ಷಣಾ ಇಲಾಖೆಯ ಎಲ್‌ಆರ್‌ಡಿಇ ಸಂಸ್ಥೆಯು ವೀರಾಪುರ ಮತ್ತು ಇತರೆ ಆರು ಗ್ರಾಮಗಳ ವ್ಯಾಪ್ತಿಯ ಒಟ್ಟು 952 ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೊಸ ಉದ್ದೇಶಿತ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಅಗತ್ಯವಿರುವಷ್ಟುಭೂಮಿಯನ್ನು ಕೋಲಾರ ಜಿಲ್ಲೆಯಲ್ಲಿ ಒದಗಿಸುವುದು ಸವಾಲಿನ ಕೆಲಸವಾಗಿದೆ. ಆದರೂ ಸರ್ಕಾರದ ಸೂಚನೆ ಬಂದ ನಂತರ ಉಳಿದ ಚಟುವಟಿಕೆಗಳು ನಡೆಯುತ್ತವೆ.

2000 ಎಕರೆ ಭೂಮಿ ಬೇಕು

ವಿಮಾನ ನಿಲ್ದಾಣಕ್ಕೆ ಜಿಲ್ಲೆಯಲ್ಲಿ 1500 ರಿಂದ 2000 ಎಕರೆ ಪ್ರದೇಶ ಜಮೀನು ಬೇಕಾಗಿರುವುದರಿಂದ ಶ್ರೀನಿವಾಸಪುರ ಮತ್ತು ಮುಳಬಾಗಿಲು ಹೊಂದಿಕೊಂಡಿರುವ ಪ್ರದೇಶದಲ್ಲಿ ಸರ್ಕಾರಿ ಜಾಗವಿದ್ದು ಇದು ಸೂಕ್ತವಾದ ಜಾಗ ಎಂದು ಹೇಳಲಾಗುತ್ತಿದೆ, ಆದರೆ ಜಿಲ್ಲಾಡಳಿತ ಮತ್ತು ಸರ್ಕಾರ ಯಾವ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತದೋ ಕಾದು ನೋಡಬೇಕು.

ಮದುವೆಗೆ ಒಂದು ದಿನವಿದ್ದಾಗಲೇ ಬಾವನಿಂದಲೇ ವರನ ಹತ್ಯೆಗೆ ಯತ್ನ

ಹಿಂದುಳಿದ ಕೋಲಾರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರ ತೀರ್ಮಾನ ತೆಗೆದುಕೊಂಡರೆ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಭೂಮಿಯನ್ನು ಒದಗಿಸಲಾಗುವುದು, ಸರ್ಕಾರ ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೇಳಿತ್ತು ಅದನ್ನು ಕಳಿಸಿದ್ದೇವೆ ಎಂದು ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ಹೇಳಿದ್ದಾರೆ.

Follow Us:
Download App:
  • android
  • ios