ಬೆಂಗಳೂರು(ಜು.17): ಬಿಬಿಎಂಪಿಯ ಮೂವರು ಪೌರಕಾರ್ಮಿಕರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಶಿಲ್ಪಾ (28) ಎಂಬುವರು ಹೆಬ್ಬಾಳದ ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು.

"

ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ಬುಧವಾರ ಸಂಜೆ 4ಕ್ಕೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾರೆ.

ಚಿಕಿತ್ಸೆ ಸಿಕ್ಕಿಲ್ಲ ಆರೋಪ:

ಸೋಂಕು ದೃಢಪಡುತ್ತಿದಂತೆ ಶಿಲ್ಪಾ ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಪರದಾಡಿದ್ದಾರೆ. ಆದರೆ, ಎಲ್ಲಿಯೂ ಹಾಸಿಗೆ ಇಲ್ಲ ಎಂದು ವಾಪಾಸ್‌ ಕಳಿಸಲಾಗಿದೆ. ಕೊನೆಗೆ ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಇಲ್ಲದೆ ಗುರುವಾರ ಬೆಳಗ್ಗೆ 5ಕ್ಕೆ ಮೃತಪಟ್ಟಿದ್ದಾರೆ. ಚಿಕಿತ್ಸೆ ಕೊಡಿಸುವಂತೆ ಬಿಬಿಎಂಪಿಯ ಹಲವು ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನ ಆಗಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇನ್ನು 6-7 ತಿಂಗಳಲ್ಲಿ ಕೊರೋನಾ ತಾರಕಕ್ಕೆ, ಎಚ್ಚರಿಕೆ ಅನಿವಾರ್ಯ: ಆರ್‌.ಅಶೋಕ್‌

ಕೆ.ಆರ್‌.ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್‌ ಎಂಬ ಪೌರಕಾರ್ಮಿಕ ಗುರುವಾರ ಮೃತಪಟ್ಟಿದ್ದಾನೆ. ವಿದ್ಯಾಪೀಠದ ನಿವಾಸಿಯಾಗಿರುವ ಪೌರಕಾರ್ಮಿಕ ಶ್ರೀನಿವಾಸ್‌ ಸೋಂಕಿಗೆ ಬಲಿಯಾದ ವರದಿಯಾಗಿದೆ. ಜತೆಗೆ ದೀಪಾಂಜಲಿ ನಗರದ ನಿವಾಸಿ ಬಿಬಿಎಂಪಿ ಟಿಪ್ಪರ್‌ ಆಟೋದಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಿಸುವ ಕಾರ್ಮಿಕ ಗಂಗಾಧರ್‌ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಆಯುಕ್ತರ ಪಿಎಗೆ ಸೋಂಕು

ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರ ಆಪ್ತ ಸಹಾಯಕ ಅಧಿಕಾರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮಂಗಳವಾರ ಆ್ಯಂಟಿಜೆನ್‌ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದು, ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಬಿಬಿಎಂಪಿ ವಿಶೇಷ ಆಯುಕ್ತರಾದ ರವಿಕುಮಾರ್‌ ಸುರಪುರ ಅವರ ಕಾರು ಚಾಲಕನಿಗೂ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.