ಕೊಟ್ಟ ನಿವೇಶನ ಕಸಿದ ನಗರಸಭೆ : ಬೀದಿಗೆ ಬಂತು ಮಾಜಿ ಸೈನಿಕನ ಕುಟುಂಬ!
ಕೊಟ್ಟ ನಿವೇಶನವನ್ನು ನಗರಸಭೆ ಕಸಿದಿದ್ದು ಇದರಿಂದ ಮಾಜಿ ಸೈನಿಕನ ಕುಟುಂಬ ಒಂದು ಇದೀಗ ಬೀದಿಗೆ ಬಿದ್ದಿದೆ.
ವರದಿ : ಆನಂದ್ ಎಂ. ಸೌದಿ
ಯಾದಗಿರಿ (ಡಿ.03): ಸ್ವಾತಂತ್ರ್ಯ ಪೂರ್ವದಲ್ಲಿ ಬರ್ಮಾ ಯುದ್ಧ ಸೇರಿ ಚೀನಾ ಹಾಗೂ ಪಾಕ್ ವಿರುದ್ಧ ಶೂರತ್ವ ಮೆರೆದು, 8 ಸೇನಾ ಪದಕಗಳನ್ನು ಹೆಮ್ಮೆಯಿಂದ ಎದೆಗೇರಿಸಿಕೊಂಡು ಮೆರೆದಿದ್ದ ಮಾಜಿ ಸೈನಿಕನ ಪುತ್ರನ ಕುಟುಂಬವೊಂದು ತಮ್ಮದಲ್ಲದ ತಪ್ಪಿಗೆ ಇದೀಗ ಬೀದಿಗೆ ಬಿದ್ದಿದೆ.
1943ರಿಂದ 28 ವರ್ಷ ಕಾಲ ಸೈನಿಕನಾಗಿದ್ದ, ರಾಯಚೂರಿನ ದಿ.ಅಮೀರ್ ಖಾನ್‌ರ, 70ರ ವಯೋವೃದ್ಧ ಪುತ್ರ ಶಂಶೀರ್ ಖಾನ್ ಕುಟುಂಬದ ಕಣ್ಣೀರ ಕತೆಯಿದು. ಯಾದಗಿರಿ ನಗರದ ರೈಲು ನಿಲ್ದಾಣದ ಸಮೀಪದ ಲಾಡೀಜ್ ಗಲ್ಲಿಯಲ್ಲಿ ದಶಕದಿಂದ ನೆಲೆಸಿರುವ ಶಂಶೀರ್ ಖಾನ್ ಹಾಗೂ ಮಕ್ಕಳು, ಮೊಮ್ಮಕ್ಕಳು ಇದೀಗ ದುಸ್ತರ ಬದುಕು ಸಾಗಿಸುತ್ತಿದ್ದಾರೆ.
ಲಡಾಖ್ ಭೀಕರ ಚಳಿಗೆ ಚೀನಾ ಸೇನೆ ಕಂಗಾಲು! ...
ದಿ.ಅಮೀರ್‌ಖಾನ್ ಸೇನೆಯಲ್ಲಿ ಸೇವೆ ಸಲ್ಲಿಸಿ ಬಳಿಕ ರಾಯಚೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಪುತ್ರ ಶಂಶೀರ್ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ, ಯಾದಗಿರಿಗೆ ಆಗಮಿಸಿದ ಕುಟುಂಬ ಮಾಜಿ ಸೈನಿಕ ಕೋಟಾದಡಿ ನಿವೇಶನ ನೀಡುವಂತೆ ಆಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿತ್ತು. ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇವರ ಮನವಿಗೆ ಸ್ಪಂದಿಸಿ, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದರು.
ಅದರಂತೆ, ಅಂದಿನ ಡಿಸಿ ಡಾ.ಕೆ.ಜಿ.ಜಗದೀಶ್ ಸೂಚನೆಯಂತೆ ಲಾಡೀಜ್‌ಗಲ್ಲಿಯ ಸರ್ವೇ ನಂ.248 ರಲ್ಲಿ ಖುಲ್ಲಾ ನಿವೇಶವೊಂದನ್ನು ನೀಡಿ, ಹಕ್ಕುಪತ್ರ ನಂತರ ನೀಡುವುದಾಗಿ ತಿಳಿಸಿದ್ದರಿಂದ ಶಂಶೀರ್ ಕುಟುಂಬ ಅಲ್ಲಿ ಶೆಡ್ ಹಾಕಿಕೊಂಡು ವಾಸವಿದೆ. ಆದರೆ ಈಗ ಉದ್ಯಾನವನ ಜಾಗ ಎಂದು ನಗರಸಭೆ ಸಿಬ್ಬಂದಿ ಒಕ್ಕಲೆಬ್ಬಿಸಿದ್ದಾರೆ.