ಬೆಂಗಳೂರು [ಫೆ.28]:  ನಕಲಿ ಕಂಪನಿಗಳ ಸ್ಥಾಪನೆ ಹಾಗೂ ಭೂ ದಾಖಲೆ ಸೃಷ್ಟಿಸಿ ಸುಮಾರು 45 ಬ್ಯಾಂಕ್‌ಗಳಿಗೆ ನೂರಾರು ಕೋಟಿ ರು. ಸಾಲ ಪಡೆದು ವಂಚಿಸುತ್ತಿದ್ದ ಚಾಲಾಕಿ ಮೋಸಗಾರರ ತಂಡ ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದೆ.

ಬನ್ನೇರುಘಟ್ಟರಸ್ತೆಯ ಅರಕೆರೆಯ ಉದಯ್‌ ಪ್ರತಾಪ್‌, ಆಯೂಬ್‌ ಖಾನ್‌ ಅಲಿ, ಶಿವಮೊಗ್ಗದ ಮಾದೇಶ್‌ ಅಲಿಯಾಸ್‌ ಮಹೇಶ್‌ ಹಾಗೂ ರಾಮೇಗೌಡ ಬಂಧಿತರು. ಆರೋಪಿಗಳಿಂದ ಒಂದು ಕೋಟಿ ರು. ಹಣ, ಮಹೇಂದ್ರ ಎಸ್‌ಯುವಿ 500 ಕಾರು ಹಾಗೂ ನಕಲಿ ದಾಖಲೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಸಾಫ್ಟ್‌ವೇರ್‌ ಕಂಪನಿ ಹೆಸರಿನಲ್ಲಿ ಸಾಲ ಪಡೆದು ವಂಚಿಸಿರುವ ಬಗ್ಗೆ ಪೊಲೀಸರಿಗೆ ಆಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಅದರಂತೆ ತನಿಖೆ ಆರಂಭಿಸಿದ ಸೈಬರ್‌ ಕ್ರೈಂ ಎಸ್ಪಿ ಎಂ.ಡಿ.ಶರತ್‌ ನೇತೃತ್ವದ ತಂಡ, ಮೊಬೈಲ್‌ ಕರೆಗಳು ಹಾಗೂ ಬ್ಯಾಂಕ್‌ ಹಣ ವರ್ಗಾವಣೆ ಮಾಹಿತಿ ಆಧರಿಸಿ ವಂಚಕರನ್ನು ಬಂಧಿಸಿದೆ.

ಬ್ಯಾಂಕ್‌ ಏಜೆಂಟರ ಮೂಲಕ ಸಾಲ!:

ಅಪರಿಚಿತರ ಹೆಸರಿನಲ್ಲಿ ನಕಲಿ ಕಂಪನಿ ಹಾಗೂ ಭೂ ದಾಖಲೆಗಳನ್ನು ಆರೋಪಿಗಳು ಸೃಷ್ಟಿಸುತ್ತಿದ್ದರು. ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹಾಗೂ ವಿಳಾಸದ ಗುರುತಿನ ಪತ್ರಗಳನ್ನು ನಕಲಿ ಮಾಡುತ್ತಿದ್ದ ವಂಚಕರು, ಅವುಗಳನ್ನು ಬಳಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಾಲಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಆರೋಪಿಗಳು, ಬ್ಯಾಂಕ್‌ ಅಧಿಕಾರಿಗಳನ್ನು ಪರಿಚಯಿಸಿಕೊಂಡು ನಿವೇಶನಗಳ ಪರಿಶೀಲನೆಗೆ ಬಂದಾಗ ಯಾಮಾರಿಸುತ್ತಿದ್ದರು. ಅದೇ ರೀತಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಕೂಡ ‘ಅಗತ್ಯ ವ್ಯವಸ್ಥೆ’ ಮಾಡಿ ಸಮಸ್ಯೆಯಾಗದಂತೆ ಮಾಡಿದ್ದರು. ಕೆಲವು ಬಾರಿ ಬ್ಯಾಂಕ್‌ ಏಜೆಂಟ್‌ರ ಮೂಲಕ ವಂಚಕರು ಸಾಲ ಪಡೆದಿದ್ದರು.

ಬಾರ್ ಗರ್ಲ್‌ನೊಂದಿಗೆ ಭರತ್ ಲವ್ವಿ ಡವ್ವಿ, ರೌಡಿಯ ಬಿಂದಾಸ್ ಲೈಫ್!

ಅಂತೆಯೇ ಕೆಲ ತಿಂಗಳ ಹಿಂದೆ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆರೋಪಿಗಳು, ಆಕ್ಸಿಸ್‌ ಬ್ಯಾಂಕ್‌ನಲ್ಲಿ ಮೊದಲ ಹಂತದಲ್ಲಿ 10 ಲಕ್ಷ ರು. ಸಾಲ ಪಡೆದಿತ್ತು. ನಂತರ ಎರಡನೇ ಹಂತದಲ್ಲಿ ಒಂದುವರೆ ಕೋಟಿ ರು. ಸಾಲವನ್ನು ಆಯೂಬ್‌ ತಂಡವು ಪಡೆದಿತ್ತು. ಆದರೆ ಸಕಾಲಕ್ಕೆ ಸಾಲ ಪಾವತಿಯಾಗದ ಕಾರಣ ಬ್ಯಾಂಕ್‌ ಅಧಿಕಾರಿಗಳು, ಆರೋಪಿಗಳನ್ನು ಸಂಪರ್ಕಿಸಲು ಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ಆಗ ದಾಖಲೆಗಳನ್ನು ಪರಿಶೀಲಿಸಿದಾಗ ಅವರಿಗೆ ಗ್ರಾಹಕರು ಮೋಸ ಎಸಗಿರುವ ಗುಮಾನಿ ಮೂಡಿದೆ. ಕೂಡಲೇ ಸಿಐಡಿ ಎಸ್‌ಪಿ ಶರತ್‌ ಅವರಿಗೆ ದೂರು ನೀಡಿದ್ದರು. ಅದರನ್ವಯ ಕಾರ್ಯಾಚರಣೆಗಿಳಿದ ಪೊಲೀಸರು, ಮೊದಲು ಅಯೂಬ್‌ ಅಲಿಯನ್ನು ಬಂಧಿಸಿದ್ದಾರೆ. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಇನ್ನುಳಿದವರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕೂಲಿ ಕಾರ್ಮಿಕರೇ ಸಾಫ್ಟ್‌ವೇರ್‌ ಉದ್ಯೋಗಿಗಳು

ಬ್ಯಾಂಕ್‌ಗಳಿಗೆ ವಂಚಿಸಲು ಆರೋಪಿಗಳು, ಹುಟ್ಟು ಹಾಕಿದ್ದ ಸಾಫ್ಟ್‌ವೇರ್‌ ಕಂಪನಿಗಳಿಗೆ ಕೂಲಿ ಕಾರ್ಮಿಕರರೇ ನಿರ್ದೇಶಕರು ಹಾಗೂ ಉದ್ಯೋಗಿಗಳಾಗಿದ್ದರು ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಬಾಡಿಗೆ ಕೊಠಡಿಯಲ್ಲಿ ಕಂಪನಿ ಸ್ಥಾಪಿಸಿದ ಅವರು, ಹತ್ತು ಮಂದಿ ಕೂಲಿ ಕಾರ್ಮಿಕರ ಆಧಾರ್‌ ಕಾರ್ಡ್‌ ಬಳಸಿ ಅವರನ್ನು ತಮ್ಮ ಕಂಪನಿ ಉದ್ಯೋಗಿಗಳೆಂದು ದಾಖಲೆ ತಯಾರಿಸಿದ್ದರು. ಬಳಿಕ ಅವರ ವೇತನ ಪ್ರಮಾಣ ಪತ್ರ ಹಾಗೂ ಗುರುತಿನ ಪತ್ರವನ್ನು ಪಡೆದು ಅದನ್ನು ಬಳಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದರು. ಆ ಖಾತೆಗಳಿಗೆ ಹುದ್ದೆಗೆ ಅನುಗುಣವಾಗಿ 50​ ರಿಂದ 10 ಸಾವಿರ ರು.ವರೆಗೆ ವೇತನ ಎಂದು ಜಮೆ ಬಳಿಕ ಡ್ರಾ ಮಾಡುತ್ತಿದ್ದರು. ಈ ಮೂಲಕ ಬ್ಯಾಂಕ್‌ಗಳಿಗೆ ಮಂಕು ಬೂದಿ ಎರಚಿದ್ದರು ಎಂದು ಮೂಲಗಳು ಹೇಳಿವೆ.
  
ಬಳಿಕ ಇಎಂಐ ರೂಪದಲ್ಲಿ ಟಿವಿ, ವಾಷಿಂಗ್‌ ಮಿಷಿನ್‌ ಖರೀದಿಸಿ ಸಿವಿಲ್‌ ಸ್ಕೋರ್‌ ಹೆಚ್ಚಿಸುತ್ತಿದ್ದರು. ಇದರಿಂದ ಉತ್ತೇಜಿತರಾಗಿ ಬ್ಯಾಂಕ್‌ಗಳು, ಆರೋಪಿಗಳ ಬಲೆಗೆ ಸುಲಭವಾಗಿ ಬಿದ್ದಿದ್ದಾರೆ. ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ವೇತನ ಅನುಸಾರ ಲಕ್ಷಾಂತರ ಸಾಲ ಮಂಜೂರು ಮಾಡಿದ್ದಾರೆ. ಈ ಕೃತ್ಯಕ್ಕೆ ಸಹಚರಿಸಿದ ಕಾರ್ಮಿಕರಿಗೆ ಶೇ.10 ರಷ್ಟುಕಮಿಷನ್‌ ರೂಪದಲ್ಲಿ ವಂಚನೆ ಹಣದಲ್ಲಿ ಪಾಲು ಸಿಗುತ್ತಿತ್ತು. ಅಲ್ಲದೆ ಬ್ಯಾಂಕ್‌ಗಳಿಗೆ ಅನುಮಾನಬಾರದಂತೆ ಆರು ತಿಂಗಳು ಕಂತು ಪಾವತಿಸಿ ಬಳಿಕ ಟೋಪಿ ಹಾಕುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೋಸದ ಜಾಲಕ್ಕೆ ಲೋಕೇಶ್‌ ಮಾಸ್ಟರ್‌ ಮೈಂಡ್‌

ಈ ಮೋಸದ ಜಾಲಕ್ಕೆ ಬಾಗಲಗುಂಟೆಯ ಲೋಕೇಶ್‌ ಎಂಬಾತನೇ ಮಾಸ್ಟರ್‌ ಮೈಂಡ್‌ ಎಂಬುದು ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿರುವುದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕೇಶ್‌ ಪತ್ನಿ ರೈತ ಪರ ಸಂಘಟನೆಯೊಂದರ ಮಹಿಳಾ ಘಟಕದ ಅಧ್ಯಕ್ಷೆ ಆಗಿದ್ದಾರೆ. ಈತನ ಮೇಲೆ ವಂಚನೆ ಆರೋಪಗಳಿವೆ. ಹನ್ನೆರಡು ವರ್ಷಗಳಿಂದ ಆತ, ನಕಲಿ ಕಂಪನಿ ಹಾಗೂ ಭೂ ದಾಖಲೆಗಳ ಮೂಲಕ ಬ್ಯಾಂಕ್‌ಗಳಿಗೆ ಮೋಸ ಮಾಡಿ ಹಣ ಸಂಪಾದಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದಾನೆ. ಲೋಕೇಶ್‌ ತಂಡದಲ್ಲಿ ಈ ಬಂಧಿತ ನಾಲ್ವರು ಸದಸ್ಯರಾಗಿದ್ದರು. ತನ್ನ ಸಹಚರರನ್ನು ಗುಂಪುಗಳನ್ನು ರಚಿಸಿ ಲೋಕೇಶ್‌ ಕೃತ್ಯ ಎಸಗುತ್ತಿದ್ದಾನೆ. ಹಾಗಾಗಿ ಆತ ನೇರವಾಗಿ ಪಾಲ್ಗೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಬಂಧಿತರ ಪೈಕಿ ಉದಯ್‌ ವಿರುದ್ಧ 15 ಮಾನವ ಕಳ್ಳ ಸಾಗಾಣಿಕೆ ಹಾಗೂ ಅಯೂಬ್‌ ಮೇಲೆ 12 ಮೆಡಿಕಲ್‌ ಸೀಟು ವಂಚನೆ ಪ್ರಕರಣಗಳಿವೆ. ಮಹೇಶ್‌ ಸಹ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಎಲ್ಲರೂ ವಿವಾಹಿತರು. ಆದರೆ ರಾಮೇಗೌಡ ಇದೇ ಮೊದಲ ಬಾರಿಗೆ ಜೈಲು ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಹೆಸರುಗಳಲ್ಲಿ ಸಹ ವಂಚನೆ

ವಂಚನೆ ಕೃತ್ಯದಲ್ಲಿ ಉದಯ್‌ ಪ್ರತಾಪ್‌ನನ್ನು ಬಂಧಿಸಿದಾಗ ಆತನ ಬ್ಯಾಂಕ್‌ ಖಾತೆಯಲ್ಲಿ ಒಂದು ಕೋಟಿ ರು. ಹಣ ಪತ್ತೆಯಾಯಿತು. ಈ ಹಣದ ಬಗ್ಗೆ ಮಾಹಿತಿ ಕೆದಕಿದಾಗ ಬ್ಯಾಂಕ್‌ವೊಂದರಲ್ಲಿ ಗುರುಪ್ರಸಾದ್‌ ಹೆಸರಿನಲ್ಲಿ ಆತ ಸಾಲ ಪಡೆದ ಹಣ ಎಂಬುದು ಗೊತ್ತಾಯಿತು. ಆರೋಪಿಗಳು, ವಿವಿಧ ಹೆಸರುಗಳಲ್ಲಿ ತಾವೇ ದಾಖಲೆ ಸಲ್ಲಿಸಿ ಹಣ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.