ಬಾಗಲಕೋಟೆ(ಜೂ.09):  ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ಹಾಲಿನ ಪುಡಿಯ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಸ್ನೇಹಿಲ್‌ ಅಂಗಡಿ ಅವರ ಪತಿ ಶಿವಾನಂದ ಅಂಗಡಿ ಅವರನ್ನು ಸಿಐಡಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

2020ರ ಅಕ್ಟೋಬರ್‌ 20ರಂದು ಜಮಖಂಡಿ ನಗರದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನಾಗಿದ್ದ 12 ಟನ್‌ ಸರ್ಕಾರದ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಜಮಖಂಡಿ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಹಾಲಿನ ಪುಡಿಯನ್ನು ವಶಕ್ಕೆ ಪಡೆದಿದ್ದರು. 

ಸಿಎಂ ಬದಲಾವಣೆ: ನಳಿನ್‌ ಕುಮಾರ್‌ ಕಟೀಲ್ ಹೇಳಿದ್ದಿಷ್ಟು

ಈ ಪ್ರಕರಣದಲ್ಲಿ ಅಂದು ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಾಲಿನ ಪುಡಿ ಅಕ್ರಮ ದಾಸ್ತಾನು ಹಾಗೂ ಮಾರಾಟ ಯತ್ನದ ಪ್ರಕರಣದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳನ್ನು ಸಹ ಅಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದ ಪೊಲೀಸರು ನಂತರ ಪ್ರಕರಣದ ತೀವ್ರತೆ ಹೆಚ್ಚಾದಂತೆ ಸರ್ಕಾರ ಕಳೆದ ಮೇ 25ರಂದು ಇಡೀ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಆದೇಶಿಸಿತ್ತು.

ಸಿಐಡಿ ತನಿಖೆ ಆರಂಭಗೊಂಡ ನಂತರ ತನಿಖೆಯ ಮುಂದುವರಿದ ಭಾಗವಾಗಿ ಮಂಗಳವಾರ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷೆಯ ಪತಿ ಶಿವಾನಂದ ಅಂಗಡಿ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.