ರಾಧಾ - ಕೃಷ್ಣ ದರ್ಶನ ಪಡೆದ ಪಾದ್ರಿಗಳ ತಂಡ
ಕ್ರಿಶ್ಚಿಯನ್ ಧರ್ಮಗುರುಗಳ ತಂಡ ಒಂದು ಪ್ರಸಿದ್ಧ ಕೃಷ್ಣ ದೇಗುಲ ಇಸ್ಕಾನ್‌ಗೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದೆ.
ಬೆಂಗಳೂರು (ಜ.26): ಬೆಂಗಳೂರು ಪ್ರಾಂತದ ಕ್ರೈಸ್ತ ಧರ್ಮಗುರು ಡಾ.ರೆವರೆಂಡ್ ಪೀಟರ್ ಮಚಾಡೋ ನೇತೃತ್ವದಲ್ಲಿ ರಾಜ್ಯದ ವಿವಿಧ ಭಾಗಗಳ ಪಾದ್ರಿಗಳು ಸೋಮವಾರ ನಗರದ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ, ರಾಧಾ-ಕೃಷ್ಣರ ದರ್ಶನ ಪಡೆದರು. ಬಳಿಕ ಪ್ರತಿ ದಿನ ಊಟ ಸಿದ್ಧಪಡಿಸುವ ಅಕ್ಷಯ ಪಾತ್ರಾ ಕಿಚನ್ ಕಾರ್ಯ ವೈಖರಿ ಕುರಿತು ಮಾಹಿತಿ ಪಡೆದರು.
ಈ ವೇಳೆ ಡಾ.ಪೀಟರ್ ಮಚಾಡೋ ಅವರು ಇಸ್ಕಾನ್ ದೇವಾಲಯದ ಕಾರ್ಯಗಳು, ಅಕ್ಷಯ ಪಾತ್ರ ಫೌಂಡೇಶನ್‌ನ ಅಡಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡರು. ಇಸ್ಕಾನ್ ಅಧ್ಯಕ್ಷ ಮಧು ಪಂಡಿತ ದಾಸ ಹಾಗೂ ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ ಅವರೊಂದಿಗೆ ಕೆಲ ಕಾಲ ಔಪಚಾರಿಕ ಮಾತುಕತೆ ನಡೆಸಿದರು.
ಕ್ರಿಶ್ಚಿಯನ್‌ರ ಮನೇಲಿ ಶ್ರೀರಾಮುಲು ಇಷ್ಟಲಿಂಗ ಪೂಜೆ! ...
ಈ ವೇಳೆ ಮಾತನಾಡಿದ ಡಾ.ಮಚಾಡೋ ಅವರು, ಧಾರ್ಮಿಕ ಕಾರ್ಯಸೂಚಿಗಳಿಗಿಂತ ಸೇವೆಯೇ ಹೆಚ್ಚು ಶಕ್ತಿಶಾಲಿ ಎಂಬ ಮದರ್ ಥೆರೆಸಾ ಅವರ ಮಾತಿನಂತೆ ಇಸ್ಕಾನ್ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸೇವೆ ಮಾಡುತ್ತಿದೆ. ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಸಹಾಯ ಮಾಡುವ ಕೈಗಳು ಉತ್ತಮ ಎನ್ನುವ ಹಾಗೆ ಇಸ್ಕಾನ್ ದೇಶದ ಹೊಸ ಪೀಳಿಗೆ ಏಳಿಗೆಗಾಗಿ ಶ್ರಮಿಸುತ್ತಿದೆ. ಮಕ್ಕಳಿಗೆ ಆಹಾರ ಪೂರೈಕೆ ಹಾಗೂ ಅಧ್ಯಯನಕ್ಕೆ ಪ್ರೇರೇಪಿಸುವ ಮುಖಾಂತರ ಭವಿಷ್ಯದ ಉತ್ತಮ ನಾಯಕರನ್ನು ಬೆಳೆಸುತ್ತಿದೆ. ಇಸ್ಕಾನ್ ಹಾಗೂ ಅದರ ಸ್ವಯಂ ಸೇವಕರ ಪ್ರಯತ್ನಕ್ಕೆ ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು. ಇಸ್ಕಾನ್‌ಗೆ ಭೇಟಿ ನೀಡಿ ಮುಖ್ಯಸ್ಥರೊಂದಿಗೆ ಚಿಂತನೆಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿ ಬಂದದ್ದಕ್ಕೆ ತಮಗೆ ಬಹಳ ಸಂತಸವಾಗಿದೆ ಎಂದು ಹೇಳಿದರು.