ಬೆಂಗಳೂರು: ಕ್ರಿಸ್‌ಮಸ್ ವೇಳೆಗೆ ಕಾರ್ಡ್ ರಸ್ತೆ ಸಿಗ್ನಲ್ ಮುಕ್ತ
ಬಸವೇಶ್ವರ ನಗರ ಜಂಕ್ಷನ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶೇ.85 ಪೂರ್ಣ, ಒಟ್ಟು 5 ಕಿ.ಮೀ. ರಸ್ತೆ ಸಿಗ್ನಲ್ ಇಲ್ಲದೆ ಸಂಚಾರ ಸಾಧ್ಯ
ಸಂಪತ್ ತರೀಕೆರೆ
ಬೆಂಗಳೂರು(ನ.27): ತುಮಕೂರು ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಬಸವೇಶ್ವರ ನಗರ ಜಂಕ್ಷನ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶೇ.85ರಷ್ಟುಪೂರ್ಣಗೊಂಡಿದ್ದು ಕ್ರಿಸ್‌ಮಸ್ ವೇಳೆಗೆ ಸಂಚಾರ ಮುಕ್ತಗೊಳ್ಳಲಿದೆ. ಕಾರ್ಡ್ ರಸ್ತೆಯ ಶಿವನಗರ ನಂತರದ ಜಂಕ್ಷನ್‌ಗಳಾದ ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡ ರಸ್ತೆಯ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದೆ. ಬಸವೇಶ್ವರ ಜಂಕ್ಷನ್ ಬಳಿ ಒಟ್ಟು 655 ಮೀಟರ್ ಉದ್ದದ ಮತ್ತು 15 ಮೀಟರ್ ಅಗಲದ(ಚತುಷ್ಪಥ ರಸ್ತೆ) ಮೇಲ್ಸೇತುವೆಯನ್ನು .54.63 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಡಿಸೆಂಬರ್ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಮಾಗಡಿ ರಸ್ತೆ ಜಂಕ್ಷನ್‌ನಿಂದ ದೋಬಿಗಾಟ್ ಜಂಕ್ಷನ್‌ವರೆಗೂ ನಡೆಯುತ್ತಿರುವ ಈ ಚತುಷ್ಪಥ ರಸ್ತೆಯ ಮೇಲ್ಸೇತುವೆ ಕಾಮಗಾರಿ ಶೇ.85ರಷ್ಟುಪೂರ್ಣಗೊಂಡಿದೆ. ಉಳಿದಂತೆ ಜಿಎಸ್‌ಟಿ ವೆಟ್‌ಮಿಕ್ಸ್, ಡಾಂಬರೀಕರಣ, ಪೈಂಟಿಂಗ್, ರಸ್ತೆ ವಿಭಜಕ ನಿರ್ಮಾಣ, ತಡೆಗೋಡೆ ಕಾಮಗಾರಿ ಮಾತ್ರ ಬಾಕಿ ಇದ್ದು ಮೇಲ್ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿರುವ ಎವಿಆರ್ ಮತ್ತು ಆರ್‌ಪಿಸಿ ಇನ್ಫಾ ಪ್ರಾಜೆಕ್ಟ್ ಕಂಪನಿಗಳು ಡಿಸೆಂಬರ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಲಿವೆ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಇನ್ನಷ್ಟು ಕಡೆ ಪೀಕ್ ಅವರಲ್ಲಿ ಭಾರೀ ವಾಹನ ನಿಷೇಧ?
ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡ ರಸ್ತೆಯ ಜಂಕ್ಷನ್ ಬಳಿಯ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸಂಚಾರ ಮುಕ್ತಗೊಂಡರೆ, ಮಾಗಡಿ ರಸ್ತೆಯ ಟೋಲ್‌ಗೇಟ್ ಸಮೀಪದ ಹೊಸಹಳ್ಳಿಯಿಂದ ರಾಜಾಜಿನಗರ-ಮಹಾಲಕ್ಷ್ಮಿ ಲೇಔಟ್ ಜಂಕ್ಷನ್‌ವರೆಗೆ ಸುಮಾರು 5 ಕಿ.ಮೀ.ಗೂ ಅಧಿಕ ರಸ್ತೆ ಸಿಗ್ನಲ್ ಮುಕ್ತಗೊಳ್ಳಲಿದೆ. ಈ ಮೂಲಕ ತುಮಕೂರು ರಸ್ತೆ- ಮಾಗಡಿ ರಸ್ತೆ- ಮೈಸೂರು ರಸ್ತೆಗೆ ನೇರ ಸಂಪರ್ಕ ದೊರೆಯಲಿದ್ದು, ವಾಹನಗಳು ಕೇವಲ 10ರಿಂದ 15 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.
ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವ ಸಲುವಾಗಿ ಮಂಜುನಾಥ ನಗರದ ಬಳಿ ಮೇಲ್ಸೇತುವೆ, ಶಿವನಗರ 1ಮತ್ತು 8ನೇ ಮುಖ್ಯ ರಸ್ತೆಯ ಕೂಡು ಸ್ಥಳದಲ್ಲಿ ಕೆಳಸೇತುವೆ ಹಾಗೂ ಬಸವೇಶ್ವರ ನಗರ ವೃತ್ತದ ಏಕಮುಖ ಸಂಚಾರದ ಬಳಿ ಮೇಲ್ಸೇತುವೆಯ ಗ್ರೇಡ್ ಸೆಪರೇಟರ್ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿತ್ತು. ಅದರಂತೆ ಮಂಜುನಾಥ ನಗರ ಬಳಿ 18.18 ಕೋಟಿ ರು.ವೆಚ್ಚದಲ್ಲಿ 270.60 ಮೀಟರ್ ಉದ್ದದ ಮೇಲ್ಸೇತುವೆಯನ್ನು 2018ರಲ್ಲಿ ಸಂಚಾರ ಮುಕ್ತಗೊಳಿಸಲಾಗಿತ್ತು. ಶಿವನಗರ 1 ಮತ್ತು 8ನೇ ಮುಖ್ಯ ರಸ್ತೆಯ ಸಂಪರ್ಕದ ಸ್ಥಳದಲ್ಲಿ ಕೆಳಸೇತುವೆಯ ಬದಲಾಗಿ 71.98 ಕೋಟಿ ರು.ವೆಚ್ಚದಲ್ಲಿ 655 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ಸಹ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.
ಸರಕು ಸಾಗಣೆ ವಾಹನ ನಿಷೇಧ: ತಗ್ಗಿತು ಹೆಬ್ಬಾಳ ಫ್ಲೈಓವರ್ ಜಾಂ
ಸಂಚಾರ ದಟ್ಟಣೆ ನಿವಾರಣೆ
ಇದೀಗ ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡ ರಸ್ತೆಯ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿ ಇರುವ ಹಿನ್ನೆಲೆಯಲ್ಲಿ ಶಿವನಗರದ ಸಮೀಪದ ಮೇಲ್ಸೇತುವೆ ರಸ್ತೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ವಾಹನಗಳು ಸವೀರ್‍ಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದು ದಟ್ಟಣೆ ಅವಧಿಯಲ್ಲಿ(ಫೀಕ್ ಅವರ್) ವಾಹನ ಸಂಚಾರ ದಟ್ಟಣೆಯಿಂದ ಸಮಸ್ಯೆಯುಂಟಾಗುತ್ತಿದೆ. ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡ ರಸ್ತೆಯ ಜಂಕ್ಷನ್ ಮೇಲ್ಸೇತುವೆ ಸಂಚಾರ ಮುಕ್ತಗೊಂಡರೆ ದಟ್ಟಣೆ ನಿವಾರಣೆಯಾಗಲಿದೆ.
2 ಗ್ರೇಡ್ ಸೆಪರೇಟರ್, 5 ಮೇಲ್ಸೇತುವೆ
ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಕೇವಲ 5 ಕಿ.ಮೀ. ಅಂತರದಲ್ಲಿ 2 ಗ್ರೇಡ್ ಸೆಪರೇಟರ್ ಮತ್ತು ಐದು ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಪೈಕಿ ಮಾಗಡಿ ರಸ್ತೆ ಟೋಲ್‌ಗೇಟ್ ಗ್ರೇಡ್ ಸೆಪರೇಟರ್, ನವರಂಗ್ ಸಮೀಪದ ಗ್ರೇಡ್ ಸೆಪರೇಟರ್, ಶಿವನಗರ ಜಂಕ್ಷನ್ ಮೇಲ್ಸೇತುವೆ, ಮಂಜುನಾಥ ನಗರ ಮೇಲ್ಸೇತುವೆ, ರಾಜಾಜಿನಗರ 1ನೇ ಬ್ಲಾಕ್ ಮೇಲ್ಸೇತುವೆ, ಮಹಾಲಕ್ಷ್ಮಿ ಲೇಔಟ್ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡ ರಸ್ತೆಯ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.