ಸರಕು ಸಾಗಾಣಿಕೆ ವಾಹನಗಳ ನಿಷೇಧಕ್ಕೆ ಕಟ್ಟು ನಿಟ್ಟಿನ ಆದೇಶ: ಡಿಸಿಪಿ ಸಚಿನ್‌ ಘೋರ್ಪಡೆ

ಬೆಂಗಳೂರು(ನ.23): ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಳಗ್ಗೆ ಪಿಕ್‌ ಅವರ್‌ನಲ್ಲಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿರ್ಬಂಧಿಸಿದ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆ ತುಸು ಇಳಿಕೆಯಾಗಿದೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಳಗ್ಗೆ 8.30 ರಿಂದ 10.30 ವರೆಗೆ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಿದ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಆ ರಸ್ತೆಯಲ್ಲಿ ಸಂಚಾರ ದಟ್ಟಣೆ ಇಳಿಕೆ ಮುಖವಾಗಿ ವಾಹನಗಳ ಸುಗಮ ಓಡಾಟಕ್ಕೆ ಅವಕಾಶವಾಗಿದೆ ಎಂದು ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ ಟ್ವಿಟ್‌ ಮಾಡಿದ್ದಾರೆ.

ಸಂಚಾರ ದಟ್ಟಣೆ ಹಿನ್ನಲೆಯಲ್ಲಿ ನಗರದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಬೆಳಗ್ಗೆ ಎರಡು ಗಂಟೆಗಳ ಕಾಲ ಸರಕು ಸಾಗಾಣೆ ವಾಹನಗಳ ಸಂಚಾರವನ್ನು ನ.18 ರಿಂದ ವಿಶೇಷ ಆಯುಕ್ತರು ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಈ ನಿಯಮ ಜಾರಿಗೆ ಬಂದ ಐದು ದಿನದಲ್ಲೇ ಸಕಾರಾತಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

Bengaluru: ಹೆಬ್ಬಾಳ ಮೇಲ್ಸೇತುವೆ ಮೇಲೆ ಬೆಳಗ್ಗೆ ಸರಕು ಸಾಗಿಸುವ ವಾಹನಗಳ ನಿಷೇಧ

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಉತ್ತರ ವಿಭಾಗದ (ಸಂಚಾರ) ಡಿಸಿಪಿ ಸಚಿನ್‌ ಘೋರ್ಪಡೆ ಅವರು, ಹೆಬ್ಬಾಳ ಮೇಲ್ಸೇತುವೆಯಲ್ಲಿ ಸರಕು ಸಾಗಾಣಿಕೆ ವಾಹನಗಳ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ. ಇದರ ಪರಿಣಾಮ ಈಗ ಫಲಿತಾಂಶ ಸಿಕ್ಕಿದೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಳಗ್ಗೆ ಸರಕು ಸಾಗಾಣಿಕೆ ವಾಹನಗಳ ಓಡಾಟದಿಂದ ಗಂಟೆಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ರಸ್ತೆಯಲ್ಲೇ ನಿಲ್ಲುತ್ತಿದ್ದವು. ಈಗ 10 ರಿಂದ 12 ನಿಮಿಷ ಅವಧಿಯಲ್ಲೇ ಸಂಚಾರ ರಸ್ತೆ ವಾಹನಗಳು ಸಂಚರಿಸಬಹುದು ಎಂದು ಹೇಳಿದರು.

ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ ಎಂದು ಸಂಭ್ರಮಿಸುವಂತಿಲ್ಲ. ಏಕೆಂದರೆ ಈವರೆಗೆ ಸಂಚಾರ ದಟ್ಟಣೆ ಕಾರಣಕ್ಕೆ ಆ ರಸ್ತೆ ಬಳಸದವರು ಈಗ ಸುಗಮ ಸಂಚಾರದಿಂದ ಆ ರಸ್ತೆಗೆ ಬರಬಹುದು. ಹೀಗಾಗಿ ಸಂಚಾರ ನಿರ್ವಹಣೆ ಮೇಲೆ ನಿಗಾ ಮುಂದುವರೆಯಲಿದೆ ಅಂತ ಉತ್ತರ ವಿಭಾಗ (ಸಂಚಾರ) ಡಿಸಿಪಿ ಸಚಿನ್‌ ಘೋರ್ಪಡೆ ತಿಳಿಸಿದ್ದಾರೆ.