ಚಿತ್ರದುರ್ಗ [ಜ.07]:  ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪಿದ ಬೆಟ್ಟದತಾವರೆಗೆರೆ ಪಂಪ್‌ಹೌಸ್‌ನಿಂದ ಭದ್ರೆ ನೀರನ್ನು ಲಿಫ್ಟ್‌ ಮಾಡುವ ಪ್ರಕ್ರಿಯೆ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದು, ವಾಣಿವಿಲಾಸ ಸಾಗರಕ್ಕೆ ಭದ್ರೆ ಹರಿದು ಬರುವುದು ನಿಂತಿದೆ. ಹಾಗಾಗಿ, ವಿವಿಸಾಗರದ ನೀರಿನ ಮಟ್ಟಸೋಮವಾರಕ್ಕೆ 102.60 ಅಡಿಗೆ ಸ್ಥಗಿತಗೊಂಡಿದ್ದು, ಒಳಹರಿವು ಪೂರ್ಣ ಪ್ರಮಾಣದಲ್ಲಿ ನಿಂತಿದೆ.

ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಭದ್ರ ಜಲಾಶಯ ಭರ್ತಿಯಾಗಿತ್ತು. ಹಾಗಾಗಿ, ತಾತ್ಕಾಲಿಕವಾಗಿ ವಿವಿ ಸಾಗರಕ್ಕೆ ನೀರು ಹರಿಸುವ ಸಂಬಂಧ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ಕೈಗೊಂಡು ಈ ನಿಟ್ಟಿನಲ್ಲಿ ಬೆಟ್ಟದ ತಾವರೆಕೆರೆ ಪಂಪ್‌ಹೌಸ್‌ನಿಂದ ನೀರನ್ನು ಲಿಫ್ಟ್‌ ಮಾಡಿ ಕಾಲುವೆಗೆ ಹಾಯಿಸಿದ್ದರು. ಆ ನೀರು ಹೊಸದುರ್ಗದ ಕೆಲ್ಲೋಡು ಬ್ಯಾರೇಜ್‌ ಮೂಲಕ ವಿವಿ ಸಾಗರಕ್ಕೆ ಹರಿದು ಹೋಗಿತ್ತು.

ಈರುಳ್ಳಿ ಬೆಳೆಯುವ ನಾಡಿಗೆ ಕಡಿಮೆ ಬೆಲೆಗೆ ಟರ್ಕಿ ಈರುಳ್ಳಿ ಲಗ್ಗೆ : ಬೆಲೆ ಎಷ್ಟಿದೆ?..

ಫಸಲು ಒಯ್ಯಲು ತೊಂದರೆ:  ಏತನ್ಮಧ್ಯೆ, ಹೊಸದುರ್ಗ ತಾಲೂಕಿನ ಕಲ್ಕೆರೆ, ಕಳ್ಳಿ ಹೊಸಹಟ್ಟಿ, ತಿಮ್ಮಾಪುರ ಗ್ರಾಮದ ರೈತರು ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸಂಪರ್ಕಿಸಿ ಭದ್ರೆ ನೀರನ್ನು ಲಿಪ್ಟ್‌ ಮಾಡಿ ಹಳ್ಳಕ್ಕೆ ಬಿಡುತ್ತಿರುವುದರಿಂದ ನಾವು ಜಮೀನಿಗೆ ಹೋಗಲು ಹಾಗೂ ಅಲ್ಲಿನ ಫಸಲನ್ನು ಒಯ್ಯಲು ತೊಂದರೆ ಆಗಿದೆ. ನಿತ್ಯ ಹಳ್ಳದ ಮೂಲಕವೇ ಹೋಗಬೇಕಾಗಿರುವುದರಿಂದ ತೊಂದರೆ ಆಗಿದೆ. ಹಾಗಾಗಿ, ಸೇತುವೆಗಳ ನಿರ್ಮಾಣ ಮಾಡಿ, ರಸ್ತೆ ಸೌಲಭ್ಯ ಕಲ್ಪಿಸುವ ತನಕ ಹಳ್ಳಕ್ಕೆ ಭದ್ರೆ ನೀರು ಬಿಡಬಾರದೆಂದು ಮನವಿ ಮಾಡಿದ್ದಾರೆ.

ರೈತರ ಮನವಿಗೆ ಸ್ಪಂದಿಸಿದ ನಿಗಮದ ಅಧಿಕಾರಿಗಳು ತಾತ್ಕಾಲಿಕವಾಗಿ ನೀರನ್ನು ಪಂಪ್‌ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಲಿಫ್ಟ್‌ ಮಾಡಿಲ್ಲ.