ಅಕಾಲಿಕವಾಗಿ ನಿಧನರಾದ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್ಐ) ಮಂಜುನಾಥ್ ಅವರ ಕುಟುಂಬಕ್ಕೆ ಬ್ಯಾಂಕ್ ಆಫ್ ಬರೋಡಾ 82 ಲಕ್ಷ ರೂಪಾಯಿ ವಿಮಾ ಪರಿಹಾರ ನೀಡಿದೆ. ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅವರ ವೇತನ ಖಾತೆಯ ಪ್ಯಾಕೇಜ್ ಅಡಿಯಲ್ಲಿ ಈ ಚೆಕ್ ಅನ್ನು ಅವರ ಪತ್ನಿ ವೃಂದಮ್ಮ ಅವರಿಗೆ ಹಸ್ತಾಂತರಿಸಲಾಯಿತು.

ಚಿತ್ರದುರ್ಗ: ಅಕಾಲಿಕ ನಿಧನ ಹೊಂದಿದ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಮಂಜುನಾಥ್ ಅವರ ಪತ್ನಿ ಹಾಗೂ ನಾಮಿನಿ ವೃಂದಮ್ಮ ಅವರಿಗೆ 82 ಲಕ್ಷಗಳ ವಿಮಾ ಪರಿಹಾರದ ಚೆಕ್ ಅನ್ನು ಬ್ಯಾಂಕ್ ಆಫ್ ಬರೋಡಾ ವತಿಯಿಂದ ಹಸ್ತಾಂತರಿಸಲಾಯಿತು.

ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಸುರೇಶ್ ಶೆಟ್ಟಿ ಅವರು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಕುಟುಂಬ ಸದಸ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ವಿತರಿಸಿದರು.

ವೇತನ ಪ್ಯಾಕೇಜ್‌ನಡಿ ದೊರೆಯುವ ವಿಮಾ ಸೌಲಭ್ಯ

ಮಂಜುನಾಥ್ ಅವರು ಬ್ಯಾಂಕ್ ಆಫ್ ಬರೋಡಾದ ಚಳ್ಳಕೆರೆ ಶಾಖೆಯಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿದ್ದರು. ಅವರ ಅಕಾಲಿಕ ನಿಧನದ ನಂತರ, ಈ ವೇತನ ಪ್ಯಾಕೇಜ್‌ನಡಿ ದೊರೆಯುವ ವಿಮಾ ಸೌಲಭ್ಯದ ಮೂಲಕ ಅವರ ನಾಮಿನಿಗೆ 82 ಲಕ್ಷಗಳ ವಿಮಾ ಪರಿಹಾರ ದೊರೆತಿದ್ದು, ಇದು ಅವರ ಕುಟುಂಬಕ್ಕೆ ಸಂಕಷ್ಟದ ಸಮಯದಲ್ಲಿ ಮಹತ್ತರ ಆರ್ಥಿಕ ನೆರವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ವ್ಯವಸ್ಥಾಪಕ ಸುರೇಶ್ ಶೆಟ್ಟಿ, ಸರ್ಕಾರಿ ನೌಕರರ ಕಲ್ಯಾಣಕ್ಕಾಗಿ ಬ್ಯಾಂಕ್ ಆಫ್ ಬರೋಡಾ ವಿಶೇಷ ವೇತನ ಪ್ಯಾಕೇಜ್ ಯೋಜನೆಗಳನ್ನು ರೂಪಿಸಿದ್ದು, ವೈಯಕ್ತಿಕ ಅಪಘಾತ ವಿಮೆ, ಜೀವ ವಿಮೆ, ಓವರ್‌ಡ್ರಾಫ್ಟ್ ಸೌಲಭ್ಯ, ಕಡಿಮೆ ಬಡ್ಡಿದರದ ಸಾಲಗಳು ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದೆ . ಇಂತಹ ಯೋಜನೆಗಳು ಅನಿರೀಕ್ಷಿತ ಸಂದರ್ಭಗಳಲ್ಲಿ ನೌಕರರು ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಕಲ್ಪಿಸುತ್ತವೆ.

ಎಲ್ಲ ಸರ್ಕಾರಿ ಇಲಾಖೆಗಳು ತಮ್ಮ ಸಿಬ್ಬಂದಿಯ ವೇತನವನ್ನು ಬ್ಯಾಂಕ್ ಆಫ್ ಬರೋಡಾದ ವೇತನ ಖಾತೆಗಳ ಮೂಲಕ ಜಮಾ ಮಾಡುವಂತೆ ಅವರು ಮನವಿ ಮಾಡಿದರು. ಇದರಿಂದ ನೌಕರರು ಹಾಗೂ ಅವರ ಕುಟುಂಬಗಳು ವಿಮಾ ರಕ್ಷಣೆ ಸೇರಿದಂತೆ ವಿವಿಧ ವಿಶೇಷ ಸೌಲಭ್ಯಗಳ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಳ್ಳಕೆರೆ ಶಾಖಾ ವ್ಯವಸ್ಥಾಪಕ ರವಿಚಂದ್ರನ್, ಚಿತ್ರದುರ್ಗ ಬಿಡಿ ರಸ್ತೆ ಶಾಖೆಯ ವ್ಯವಸ್ಥಾಪಕ ಮಣಿ ಮಾರನ್ ಇದ್ದರು.

ಇದನ್ನೂ ಓದಿ: ಆದಾಯ ಹೆಚ್ಚಳಕ್ಕೆ BMTC ಹೊಸ ಪ್ಲಾನ್; ಬಸ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿದೆ ನ್ಯೂ QR ಕೋಡ್