ಚಳ್ಳಕೆರೆಯಲ್ಲಿ ರಂಗನಾಥ್ ಎಂಬುವವರಿಗೆ ರಸ್ತೆಯಲ್ಲಿ ₹50,000 ಹಣದ ಬ್ಯಾಗ್ ಸಿಕ್ಕಿದೆ. ಬ್ಯಾಗ್‌ ಅನ್ನು ಮನೆಗೆ ತೆಗೆದುಕೊಂಡು ಹೋಗದೆ, ನೇರವಾಗಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ನಂತರ ಹಣ ಕಳೆದುಕೊಂಡ ಗೋವರ್ಧನ್ ಎಂಬುವವರಿಗೆ ಪೊಲೀಸರು ಹಣವನ್ನು ಹಿಂದಿರುಗಿಸಿದ್ದಾರೆ.

ಚಿತ್ರದುರ್ಗ (ಆ.1): ನಾವು ಯಾವಾಗಲಾದರೂ ನನಗೆ ದಿಢೀರನೆ ಒಂದು ಲಕ್ಷ ಅಥವಾ ಒಂದು ಕೋಟಿ ಹಣ ಸಿಕ್ಕಿದರೆ ನನ್ನ ಕಷ್ಟವೆಲ್ಲಾ ಪರಿಹಾರ ಆಗುತ್ತದೆ ಎಂದು ಯೋಚಿಸಿರುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಯಾರೋ ಒಬ್ಬರು ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದ 50,000 ರೂ. ಹಣ ಸಿಕ್ಕಿದೆ. ಆದರೆ, ಅದನ್ನು ಮನೆಗೆ ಕೊಂಡೊಯ್ಯದೇ ಕಂಕಳಲ್ಲಿ ಇಟ್ಟುಕೊಂಡು ಸೀದಾ ಪೊಲೀಸ್ ಠಾಣೆಗೆ ಬಂದು, ಪೊಲೀಸರಿಗೆ ಒಪ್ಪಿಸಿದ್ದಾನೆ.

ಹೌದು, ಈ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ. ಇಂತಹ ನಂಬಿಕೆಯುಳ್ಳ ವ್ಯಕ್ತಿಯನ್ನು ನಾವೆಂದೂ ನೋಡಿರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಈಗಲೂ ನಮ್ಮ ಸಮಾಜದಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಉಳಿದಿದೆ ಎಂಬುದಕ್ಕೆ ಇಂತಹ ವ್ಯಕ್ತಿಗಳೇ ಸಾಕ್ಷಿ ಎಂದು ಕೆಲವರು ಹೇಳಿದ್ದಾನೆ.

ನಗರಂಗೆರೆ ಗ್ರಾಮದ ನಿವಾಸಿಯಾದ ರಂಗನಾಥ್ ಅವರು ಚಳ್ಳಕೆರೆ ಪಟ್ಟಣದ ರಸ್ತೆ ನಡೆದುಕೊಂಡು ಹೋಗುವಾಗ ರಸ್ತೆ ಬದಿಯಲ್ಲಿ ಒಂದು ಬ್ಯಾಗ್ ಬಿದ್ದಿತ್ತು. ಅದನ್ನು ತೆಗೆದುಕೊಂಡು ಅಲ್ಲಿಯೇ ಕೆಲಹೊತ್ತು ಕಾದಿದ್ದಾರೆ. ಯಾರಾದರೂ ಬ್ಯಾಗ್ ಕೇಳಿಕೊಂಡು ಬರುತ್ತಾರಾ ಎಂದು ಕಾದು ನೋಡಿದಾಗ ಅದನ್ನು ಕೇಳಲು ಯಾರೂ ಬರಲಿಲ್ಲ. ಆಗ ಬ್ಯಾಗ್ ತೆರೆದು ನೋಡಿದಾಗ ಕಂತೆ ಕಂತೆ ಹಣವಿರುವುದು ಪತ್ತೆಯಾಗಿದೆ. ಈ ಹಣ ಕಳೆದುಕೊಂಡವರು ಎಷ್ಟು ಸಂಕಷ್ಟ ಎದುರಿಸುತ್ತಿದ್ದಾರೋ ಎಂಬ ತಿಳುವಳಿಕೆಯಿಂದ ಹಣದ ಬ್ಯಾಗ್ ಅನ್ನು ಕಂಕಳಲ್ಲಿ ಇಟ್ಟುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಪೊಲೀಸರಿಗೆ ಈ ಹಣದ ಬ್ಯಾಗ್ ಒಪ್ಪಿಸಿ, ಇದರಲ್ಲಿ 50 ಸಾವಿರ ರೂ. ಹಣವಿದೆ. ಇದು ತನಗೆ ರಸ್ತೆಯಲ್ಲಿ ಸಿಕ್ಕಿದ್ದು, ವಾರಸುದಾರರು ಬಂದು ಕೇಳಿದಲ್ಲಿ ಅವರಿಗೆ ಕೊಡಿ ಎಂದು ಹೇಳಿದ್ದಾರೆ.

ಇದಾದ ಕೆಲವು ಹೊತ್ತಿನ ನಂತರ ಗೋವರ್ಧನ್ ಎನ್ನುವವರು ತನ್ನ 50 ಸಾವಿರ ರೂ. ಹಣ ಬಿದ್ದು ಕಳೆದುಹೋಗಿದೆ. ಅದನ್ನು ಹುಡುಕಿಕೊಡುವಂತೆ ದೂರು ಕೊಡಲು ಬಂದಿದ್ದಾರೆ. ಹೇಗೆ ಕಳೆದುಕೊಂಡಿದ್ದೀರಿ ಎಂದು ಕೇಳಿದಾಗ ತಾನು ಚಳ್ಳಕೆರೆ ಪಟ್ಟಣದ ನಿವಾಸಿ ಆಗಿದ್ದು, ತಮ್ಮ ಕೆಲಸದ ನಿಮಿತ್ತ ಹಣದ ಬ್ಯಾಗ್ ಇಟ್ಟುಕೊಂಡು ಹೋಗುವಾಗ ರಸ್ತೆ ಬದಿಯಲ್ಲಿ ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಹಣ ವಶಪಡಿಸಿಕೊಂಡಿರುವ ಮಾಹಿತಿ ತಿಳಿದುಬಂದಿದೆ.

ಹಣ ಮರಳಿಸಿದ ಪೊಲೀಸರು:

ಪೋಲಿಸ್‌ ಠಾಣೆಯ ಮೂಲಕ ಪರಿಶೀಲನೆ ನಡೆಸಿದ ಪೊಲೀಸರು, ಗೋವರ್ಧನ್ ಅವರದ್ದೇ ಹಣ ಎಂಬುದು ಸ್ಪಷ್ಟವಾಗಿ ತಿಳಿದ ಬಳಿಕ ಅವರಿಗೆ, ಇನ್ನೊಬ್ಬ ವ್ಯಕ್ತಿ ರಂಗನಾಥ್ ಕೊಟ್ಟು ಹೋಗಿದ್ದ ಹಣವನ್ನು ಮರಳಿಸಲು ತೀರ್ಮಾನಿಸಿದ್ದಾರೆ. ಹಣವನ್ನು ಮರಳಿ ಕೊಡುವುದಕ್ಕೆ ಸ್ವತಃ ಹಣವನ್ನು ಪೊಲೀಸ್ ಠಾಣೆಗೆ ತಂದುಕೊಟ್ಟಿದ್ದ ರಂಗನಾಥ್‌ ಅವರನ್ನು ಕರೆಸಿ, ಅವರ ಕೈಯಿಂದಲೇ ಗೋವರ್ಧನ್ ಅವರಿಗೆ ಹಣವನ್ನು ಕೊಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪೊಲೀಸರ ಸಮ್ಮುಖದಲ್ಲಿ ರಂಗನಾಥ್ ಅವರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.