ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಹೂಡಿಕೆ ಸಂಸ್ಥೆ ತೆರೆದು, ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಜನರಿಗೆ ಅಂದಾಜು ₹4500 ಕೋಟಿ ವಂಚಿಸಿದ ಆರೋಪದ ಮೇಲೆ ಶಿವಾನಂದ ನೀಲಣ್ಣನವರನನ್ನು ಬಂಧಿಸಲಾಗಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಾಗಿದ್ದರಿಂದ, ಇದೀಗ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ.

ಬೆಳಗಾವಿ: ಠೇವಣಿದಾರರಿಗೆ ಅಂದಾಜು ₹4,500 ಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಶಿವಾನಂದ ನೀಲಣ್ಣವರ ಮಾಲೀಕತ್ವದ ಶಿವಂ ಅಸೋಸಿಯೇಟ್ಸ್ ಹಗರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ.

Add Asianetnews Kannada as a Preferred SourcegooglePreferred

ಐದು ದಿನ ಪೊಲೀಸ್ ಕಸ್ಟಡಿಗೆ

ಭಾನುವಾರ ನಗರಕ್ಕೆ ಆಗಮಿಸಿದ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ ಅವರು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುಮಾರು ಎರಡು ಗಂಟೆ ಸಭೆ ನಡೆಸಿದರು. ಬಳಿಕ, ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರಿಂದ ಪ್ರಕರಣದ ತನಿಖಾ ವರದಿಯ ಕಡತಗಳನ್ನು ಪಡೆದುಕೊಂಡರು. ಈ ಮಧ್ಯೆ, ಪ್ರಕರಣದ ಆರೋಪಿ, ನೀಲಣ್ಣವರನನ್ನು ಶನಿವಾರ ರಾತ್ರಿ ನ್ಯಾಯಧೀಶರ ಎದುರು ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಸಿಐಡಿ ತನಿಖಾ ತಂಡ ನೀಲಣ್ಣವರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಿದೆ.

ದಾಖಲೆ ಹಸ್ತಾಂತರ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪೊಲೀಸ್‌ ಆಯುಕ್ತ ಭೂಷಣ ಬೋರಸೆ, ಈ ವಂಚನೆ ಪ್ರಕರಣ ಇತರ ರಾಜ್ಯಗಳಿಗೂ ವ್ಯಾಪಿಸಿರುವ ಶಂಕೆ ಇದೆ. ₹4,500 ಕೋಟಿಗೂ ಹೆಚ್ಚು ಅವ್ಯವಹಾರ ಆಗಿರುವುದರಿಂದ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ನಾವು ಈವರೆಗೆ ನಡೆಸಿದ ತನಿಖೆಯ ವರದಿಯನ್ನು ಅವರಿಗೆ ನೀಡಿದ್ದೇವೆ ಎಂದು ತಿಳಿಸಿದರು.

ಹಗರಣವೇನು?:

ಮಾಜಿ ಸೈನಿಕರು ಸೇರಿ ಅಂದಾಜು 4,500ಕ್ಕೂ ಅಧಿಕ ಮಂದಿ ನೀಲಣ್ಣವರ ಮಾಲಿಕತ್ವದ ಶಿವಂ ಅಸೋಸಿಯೇಟ್ಸ್‌ನಲ್ಲಿ ಅಂದಾಜು 4,500 ಕೋಟಿ ರೂ.ಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದಾರೆ. ಇಲ್ಲಿ ಆರ್‌ಬಿಐನ ಯಾವುದೇ ನಿಯಮಗಳು ಪಾಲನೆಯಾಗಿಲ್ಲ, ಬದಲಿಗೆ ಠೇವಣಿಗೆ ಹೆಚ್ಚಿನ ಬಡ್ಡಿ ಕೊಡುವ ಬಗ್ಗೆ ಆಮಿಷವೊಡ್ಡಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿವೆ. ಜನರ ಹಣಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ ತನಿಖೆಗೆ ಡಿಸಿ ಮೊಹಮ್ಮದ್ ರೋಷನ್ ಆದೇಶ ಮಾಡಿದ್ದರು. ಇದರ ಬೆನ್ನಲ್ಲೇ ನೀಲಣ್ಣವರನ ಮನೆ, ಶಿವಂ ಅಸೋಸಿಯೇಟ್ಸ್‌ ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಶುಕ್ರವಾರ ರಾತ್ರಿ ಆತನನ್ನು ಬಂಧಿಸಲಾಗಿತ್ತು. ಬಳಿಕ, ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಇದರ ಬೆನ್ನಲ್ಲೇ ಈಗ ಸಿಐಡಿ ತನಿಖೆ ಆರಂಭವಾಗಿದೆ.

₹4500 ಕೋಟಿ ಕೇಸ್‌ನಲ್ಲಿ ರಾಜಕೀಯವಿಲ್ಲ: ಸತೀಶ

ಶಿವಂ ಅಸೋಸಿಯೇಟ್ಸ್ ಮೇಲೆ ದಾಳಿ ಮತ್ತು ಬಂಧನದಲ್ಲಿ ಯಾವುದೇ ರಾಜಕೀಯ ಉದ್ದೇಶ, ಪ್ರಭಾವವಿಲ್ಲ. ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ₹4500 ಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಪ್ರಕರಣವನ್ನು ಸರ್ಕಾರ ಅಧಿಕೃತವಾಗಿ ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ವರದಿ ನೀಡಿದ ನಂತರವೇ ಈ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಮತ್ತು ನಿಖರ ಮಾಹಿತಿ ಹೊರಬರಲಿದೆ. ಈ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಸಾರ್ವಜನಿಕರ ಹಣಕಾಸು ವಂಚನೆಗೆ ಸಂಬಂಧಿಸಿದ ವಿಷಯವಾಗಿದೆ. ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಅಥವಾ ಪ್ರೇರೆಪಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.