ಚಿತ್ರದುರ್ಗ(ಜು.16): ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲೂಕಿನ 16 ಕೆರೆಗಳಿಗೆ ನದಿ ನೀರು ಹಾಯಿಸಿ ಭರ್ತಿ ಮಾಡಬೇಕು. ಭದ್ರಾ ಮೇಲ್ದಂಡೆ ಅಥವಾ ಸಾಸ್ವೆಹಳ್ಳಿ 2ನೇ ಹಂತದ ಯೋಜನೆ, ಯಾವುದಾದರೂ ಓಕೆ. ಕೆರೆಗಳನ್ನಂತೂ ತುಂಬಿಸಲೇಬೇಕು ಎಂದು ತಾಲೂಕಿನ ರೈತರು ಹಕ್ಕೊತ್ತಾಯ ಮಂಡಿಸಿದರು.

ಚಿತ್ರದುರ್ಗ ಒನಕೆ ಒಬವ್ಪ ಪ್ರತಿಮೆ ಮುಂಭಾಗ ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲೂಕಿನ ರೈತರು ಸೋಮವಾರ ಹಕ್ಕೊತ್ತಾಯ ಮಂಡಿಸಿದ್ದು, 3 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಕನಕ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ರೈತರು ಒಂದೂವರೆ ಕಿ.ಮೀ.ನಷ್ಟು ಹಾದಿ ಸವೆಸಿ ಒನಕೆ ಓಬವ್ವ ಪ್ರತಿಮೆ ಮುಂಭಾಗ ಸಮಾವೇಶಗೊಂಡರು.

ಇಲ್ಲಿಂದಲೇ ಅಂದರೆ ತುಂಗಾಭದ್ರಾ ನದಿಯಿಂದ 0.299 ಟಿಎಂಸಿಯಷ್ಟು ನೀರನ್ನು ಎತ್ತಿ ಸೂಳೆಕೆರೆಗೆ ಹಾಯಿಸಿ ಡೆಲಿವರಿ ಚೇಂಬರ್ 3ರ ಮೂಲಕ 7.7 ಕಿ.ಮೀ ನಷ್ಟು ರೇಸಿಂಗ್ ಮೇನ್ ಮತ್ತು ಗ್ರಾವಿಟಿ ಮೂಲಕ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕಿನ 16 ಕೆರೆಗಳನ್ನು ತುಂಬಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಸವಕೇಂದ್ರ ಮರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರು, ರೈತರು ನಡೆಸುತ್ತಿರುವ ಸಾತ್ವಿಕ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಬಾರದೆಂದರೆ ಮುಖ್ಯಮಂತ್ರಿಗಳು ತ್ವರಿತಗತಿಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.

ನೀರು ಬರುತ್ತೆ ಅಂತ ಸುಮ್ಮನಿರಬೇಡಿ:

ಮೊದಲು ರೈತರು ಸಂಘಟಿತರಾಗಿ, ಮುಂದೊಂದು ದಿನ ನೀರು ಬರುತ್ತದೆಂದು ಸುಮ್ಮನಿರಬೇಡಿ. ಹಿರಿಯೂರಿನ ವಾಣಿವಿಲಾಸ ಸಾಗರಕ್ಕೂ ನೀರು ಬರಬೇಕು. ಮುರುಘಾಮಠದಲ್ಲಿ ಪ್ರತಿ ವರ್ಷ ನಡೆಯುವ ಶರಣ ಸಂಸ್ಕೃತಿಯಲ್ಲಿ ಕಳೆದ ಬಾರಿ ನೀರಾವರಿ ಸಚಿವ ಡಿ. ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿ ಬಿಟ್ಟಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಿದ್ಧಪಡಿಸಿ ಎಂದು ರೈತರ ಪರವಾಗಿ ಬೇಡಿಕೆ ಇಟ್ಟು ಅದಕ್ಕಾಗಿ 210 ಕೋಟಿ ರು.ಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಡಾ.ಶಿವಮೂರ್ತಿ ಮುರುಘಾಶರಣರು ಸ್ಮರಿಸಿದರು.