ಚಿತ್ರದುರ್ಗದ ಕೋಟೆ ನೋಡಲು ಸ್ನೇಹಿತರೊಂದಿಗೆ ತರಳಿದರೆ ಅಲ್ಲಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ಕೋತಿರಾಮ ನಿಮ್ಮ ಕಣ್ಣಿಗೆ ಬಿದ್ದೇ ಬೀಳ್ತಾರೆ. ಅವರ ಸಾಹಸದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. 

ಚಿತ್ರದುರ್ಗದ ಕೋತಿರಾಜ್ ಅಲಿಯಾಸ್  ಜ್ಯೋತಿರಾಜ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಚಿತ್ರದುರ್ಗದ ಕೋಟೆಯೇ ಇರಲಿ, ವಿಶ್ವವಿಖ್ಯಾತ ಜೋಗ ಜಲಪಾತವೇ ಇರಲಿ ಕೋತಿರಾಜ್ ಪಟಪಟನೇ ಹತ್ತಿ ಇಳಿದುಬಿಡ್ತಾರೆ. ಜೋಗ ಜಲಪಾತದಲ್ಲಿ ಶವಗಳು ಸಿಲುಕಿಕೊಂಡಾಗ ಕರೆ ಹೋಗುವುದು ಇದೇ ಜ್ಯೋತಿರಾಜ್ ಅವರಿಗೆ.. 

ನಾವು ಕೂಡಾ ಈ ವಾರ ಸ್ನೇಹಿತರೊಂದಿಗೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ ಎಂದೇ ಖ್ಯಾತಿವೆತ್ತ ಚಿತ್ರದುರ್ಗದ ಕೋಟೆಯ ನೋಡಲು ತೆರಳಿದ್ದೆವು.  ಒಬ್ಬೊಬ್ಬರ ಕಣ್ಣಿಗೆ ಒಂದೊಂದು ತರಹ ಕಾಣುತ್ತದೆ. ಇತಿಹಾಸದ ನಂಟು ಇದ್ದೇ ಇದೆ.

ಮದಕರಿ ನಾಯಕ, ಒನಕೆ ಓಬವ್ವ ಕೋಟೆಯ ಎರಡು ದೊಡ್ಡ ಹೆಸರು. ಅವರ ಸಾಹಸ-ಶೌರ್ಯಗಳೇ ಪ್ರವಾಸಿಗರಿಗೆ ಪ್ರೇರಣೆ. ಮೆಟ್ಟಿಲುಗಳನ್ನು ಏರುತ್ತ ಏರುತ್ತ ನಿಮಗೆ ಕೋಟೆಯ ನಿಜವಾದ ಶಕ್ತಿ ಅರಿವಿಗೆ ಬರುತ್ತದೆ. ಏಳು ಸುತ್ತಿನ ಕೋಟೆ ಎಂದು ಕರೆಸಿಕೊಳ್ಳುವುದು ಆಧುನಿಕತೆ ಭರಾಟೆಗೆ ಸಿಕ್ಕಿ ಮೂರು ಸುತ್ತಿಗೆ ಇಳಿದಿದೆ. ಕೋಟೆ ಕೆಳಗಿನ ಬಯಲು ಪ್ರದೇಶ ಇಂದು ನಗರ-ಪಟ್ಟಣವಾಗಿ ಬದಲಾಗಿದೆ. 

ಅಮೆರಿಕದಲ್ಲಿ ಸಾಹಸ ಮೆರೆಯಲಿದ್ದಾರೆ.. ತನ್ನ ಕೊನೆಯ ಪ್ರದರ್ಶನ ಎಂದ ಕೋತಿರಾಜ!

ಇವೆಲ್ಲಾ ಏನೇ ಇರಲಿ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ನಿಮಗೆ ಜ್ಯೋತಿರಾಜ್ ಸದ್ಯದ ಮಟ್ಟಿಗೆ ಆಕರ್ಷಣೆ. ಅವರ ಸಾಹಸಕ್ಕೆ ಒಂದು ಶಹಭಾಷ್ ಹೇಳಿ ಮುಂದೆ ಸಾಗಲೇಬೇಕು. ಶನಿವಾರ ಮತ್ತು ಭಾನುವಾರ ಕೋತಿರಾಜ್ ಅಲ್ಲಿ ಇದ್ದೇ ಇರುತ್ತಾರೆ.

ನಾವು ಹೋದ ದಿನವೂ ಜ್ಯೋತಿರಾಜ್ ಸಾಹಸ ಮೆರೆಯಲು ಮುಂದಾಗಿದ್ದರು. ಎಂದಿನಂತೆ ತಮ್ಮದೇ ಶೈಲಿಯಲ್ಲೇ ಮಾತನಾಡುತ್ತ ಕೋಟೆಯ ಕಲ್ಲುಗಳನ್ನು ಹಿಡಿದು ಮೇಲಕ್ಕೆ ಏರಿಯೇ ಬಿಟ್ಟರು.  ಏರುವಾಗ ಮಧ್ಯದಲ್ಲಿ ಬೇಕಂತಲೇ ಸ್ಲಿಪ್ ಮಾಡಿ ನೋಡುತ್ತಿದ್ದವರಲ್ಲಿ ಒಂದು ಕ್ಷಣ ಆತಂಕ ತಂದರು. ಕೆಳಗಿದ್ದವರು ಹೋ ಇದು ಡ್ರಾಮಾ ಎಂದು ಕೂಗಿಕೊಂಡಿದ್ದೂ ಆಯಿತು.  ಏರಿದ ಮೇಲೆ ಮತ್ತೆ ಇನ್ಯಾರಾದರೂ ಏರುತ್ತಾರೆಯೇ? ಎಂದು ಸವಾಲು ಕೂಡ ಎಸೆದರು.. ಕೆಳಗಿನಿಂದ ಹೌದೋ ಹುಲಿಯಾ ಡೖಲಾಗ್ ಸಹ ಕೇಳಿ ಬಂತು.

ಜಗತ್ತಿನ ಅತೀ ಎತ್ತರದ ಅಮೆರಿಕದ ಏಂಜಲ್​​ ಫಾಲ್ಸ್​​ ಹತ್ತುವ ಸಾಹಸಕ್ಕೆ ಕೋತಿರಾಜ್​  ಮುಂದಾಗಿದ್ದಾರೆ. ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದೇನೆ. ಫೆಬ್ರವರಿ 26-27ಕ್ಕೆ ದಿನಾಂಕ ಸಹ ಫಿಕ್ಸ್ ಆಗಿದೆ. ನಾನು ಬದುಕಿ ಬರುವುದು ಅನುಮಾನ. ನಾನೊಬ್ಬ ಕನ್ನಡಿಗ, ಇಲ್ಲಿ ಸಂಪಾದನೆಯಾಗುವ ಹಣವನ್ನು ಕೋಟೆ ಉಳಿವಿಗೆ, ನನ್ನ ಶಿಷ್ಯರ ಕಲ್ಯಾಣಕ್ಕೆ ಬಳಸುತ್ತೇನೆ ಎಂದು ಹೇಳವಾಗ ಅವರ ಕಣ್ಣಲ್ಲಿ ಏಂಜಲ್ ಫಾಲ್ಸ್ ಹತ್ತಿ ದಾಖಲೆ ಬರೆಯುವ ವಿಶ್ವಾಸ ಕಾಣುತ್ತಿತ್ತು.ಸ್ಟಂಟ್ ಮಾಡದೆ ಡೂಪ್ ಬಳಸಿ ಸಾಹಸ ತೋರುವ ಸಿನಿಮಾ ಹೀರೋಗಳಿಗೆ ಕಟೌಟ್, ಹಾರ, ಹಾಲಿನ ಅಭಿಷೇಕ..ಅವರವರ ಅಭಿಮಾನಕ್ಕೆ ಬಿಟ್ಟಿದ್ದು. ರಿಯಲ್ ಆಗಿ ಸ್ಟಂಟ್ ಮಾಡುವ, ಜೀವವನ್ನೇ ಪಣಕ್ಕಿಟ್ಟು ಸಾಹಸ ತೋರುವ ನಮ್ಮ ಕೋತಿರಾಜ್ ಅವರಿಗೆ ಒಂದು ಗುಡ್ ಲಕ್ ಹೇಳೋಣ. ಎಂಜಲ್ ಫಾಲ್ಸ್ ಏರಿ ಜಗತ್ತಿಗೆ ಚಿತ್ರದುರ್ಗದ ಸಾಹಸವನ್ನು ತಿಳಿಸಲಿ. ಗುಡ್ ಲಕ್ ಕೋತಿರಾಜ್!

"