Chitradurga Medical College : ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು, ಶೀಘ್ರವೇ ಕಾರ್ಯಾರಂಭ
* ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ: ಸುಧಾಕರ್
* 150 ಸೀಟುಗಳ ಕಾಲೇಜು ಆರಂಭಕ್ಕೆ ಆಡಳಿತಾತ್ಮಕ ಅನುಮೋದನೆ
* 2023-24ರ ಸಾಲಿನಿಂದ ಪ್ರಾರಂಭಿಸಲು ನಿರ್ಧಾರ
ಬೆಂಗಳೂರು(ಫೆ. 18) ಚಿತ್ರದುರ್ಗ (Chitradurga)ಜಿಲ್ಲೆಯಲ್ಲಿ 150 ಎಂಬಿಬಿಎಸ್ (MBBS)ಸೀಟ್‌ಗಳ ವೈದ್ಯಕೀಯ ಕಾಲೇಜ್ ಆರಂಭಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr. K Sudhakar) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ’ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು ಸಿವಿಲ್ ಕಾಮಗಾರಿ ಸೇರಿ ಒಟ್ಟು 500 ಕೋಟಿ ರೂ. ಖರ್ಚಾಗಲಿದೆ. ಚಿತ್ರದುರ್ಗ ಮೆಡಿಕಲ್ ಕಾಲೇಜನ್ನು 2023-24ರ ಸಾಲಿನಿಂದ ಪ್ರಾರಂಭಿಸಲು ಅಗತ್ಯ ಪ್ರಕ್ರಿಯೆ ನಡೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿರುವ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಜೊತೆ ಹೊಸದಾಗಿ 4 ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 100 ಎಂಬಿಬಿಎಸ್ ಸೀಟುಗಳ ಪ್ರವೇಶ ಮಿತಿಯೊಂದಿಗೆ 2022-23 ನೇ ಸಾಲಿಗೆ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಈಗ ಚಿತ್ರದುರ್ಗದಲ್ಲೂ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಚಿತ್ರದುರ್ಗದಲ್ಲಿ 150 ಸೀಟುಗಳ ಎಂಬಿಬಿಎಸ್ ಕಾಲೇಜನ್ನು 2015-16ರಲ್ಲೇ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಆದರೆ 2013-14 ರ ಆರ್ಥಿಕ ವರ್ಷದಲ್ಲಿ ಕಲಬುರ್ಗಿ, ಗದಗ, ಕೊಪ್ಪಳ, ಕಾರವಾರ, ಕೊಡಗು ಮತ್ತು ಚಾಮರಾಜನಗರದಲ್ಲಿ ಹೊಸ 6 ಮೆಡಿಕಲ… ಕಾಲೇಜುಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಹೊಂದಿಸಿಕೊಳ್ಳಬೇಕಾಗಿದ್ದರಿಂದ ತುಮಕೂರು, ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮೆಡಿಕಲ… ಕಾಲೇಜು ಸ್ಥಾಪನೆ ಮುಂದೂಡಲಾಗಿತ್ತು. 2021-22ನೇ ಸಾಲಿನ ಬಜೆಚ್ ನಲ್ಲಿ, ಚಿತ್ರದುರ್ಗ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.
ಈ ಮೂಲಕ ರಾಜ್ಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯರಾಗುವ ಕನಸು ನನಸಾಗಲಿದೆ. ಅಷ್ಟೇ ಅಲ್ಲದೆ, ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡ ಆಸ್ಪತ್ರೆಗಳಲ್ಲಿ ಬಡವರಿಗೆ ಉನ್ನತ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಪ್ರಕಾರ ಪ್ರತಿ 1,000 ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. ಆದರೆ ಕರ್ನಾಟಕದಲ್ಲಿ 1,800 ಜನಸಂಖ್ಯೆಗೆ ಒಬ್ಬ ವೈದ್ಯರ ಲಭ್ಯತೆ ಇದೆ. ಈ ಅಸಮತೋಲನ ಸರಿಪಡಿಸಲು ಹಾಗೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇದೇ ಪ್ರಯತ್ನದ ಭಾಗವಾಗಿ ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಸಚಿವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ 100 ಎಂಬಿಬಿಎಸ್ ಸೀಟುಗಳ ಕಾಲೇಜು ಆರಂಭವಾಗಲಿದ್ದು, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.