Chirag Ramesh Hegde ಶಿರಸಿ ಮೂಲದ ಚಿರಾಗ್‌ ಹೆಗಡೆ ಅಮೆರಿಕದ DARPA TRIAGE ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ 9.4 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಇವರು ತುರ್ತು ವೈದ್ಯಕೀಯ ಚಿಕಿತ್ಸೆಗೆ ಆದ್ಯತೆ ನೀಡುವ ಎಐ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಾರೆ.

ಕಾರವಾರ (ನ.24): ಅಮೆರಿಕದಲ್ಲಿ ಇತ್ತೀಚೆಗೆ ನಡೆದ ವಿಶ್ವಮಟ್ಟದ DARPA TRIAGE ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿರಾಗ್‌ ರಮೇಶ ಹೆಗಡೆ(Chirag Ramesh Hegde) ಎಂಬುವರು ಪ್ರಥಮ ಸ್ಥಾನಗಳಿಸಿದ್ದು, 1 ಮಿಲಿಯನ್‌ ಡಾಲರ್‌ (ಸುಮಾರು 9.4 ಕೋಟಿ ರು.) ಬಹುಮಾನಕ್ಕೆ ಭಾಜನರಾಗಿದ್ದಾರೆ. ಶಿರಸಿ ತಾಲೂಕಿನ ಮುಂಡಿಗೇಸರ ಮೂಲದ ಚಿರಾಗ್‌ 2023ರಲ್ಲಿ ಗುವಾಹಟಿ ಐಐಟಿಯಲ್ಲಿ ಬಿಟೆಕ್‌ ಪದವಿ ಪಡೆದಿದ್ದಾರೆ.

ಮಷಿನ್ ಲರ್ನಿಂಗ್ಅನ್ನು ಸ್ವಯಂ ಅಧ್ಯಯನದ ಮೂಲಕ ಕರಗತ

ಚಿರಾಗ್‌ ಅವರು ಅಭಿವೃದ್ಧಿಪಡಿಸಿರುವ ಎಐ ತಂತ್ರಾಂಶ ಮಾದರಿಯು ನೈಸರ್ಗಿಕ ವಿಕೋಪಗಳು, ತೀವ್ರ ಅಪಘಾತಗಳು ಮತ್ತು ಯುದ್ಧ ಸನ್ನಿವೇಶಗಳಂತಹ ಬೃಹತ್ ಸಾವು-ನೋವುಗಳ ಘಟನೆಗಳ ಸಮಯದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗೆ ಆದ್ಯತೆ ನೀಡಲು ಗಾಯಾಳುಗಳ ದತ್ತಾಂಶವನ್ನು ವೇಗವಾಗಿ ವಿಶ್ಲೇಷಿಸುತ್ತದೆ.

ಚಿರಾಗ ಅವರು 2023ರಲ್ಲಿ ಅಸ್ಸಾಂನ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಪ್ರಸ್ತುತ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಅವರು, ಕಠಿಣ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಆಸಕ್ತಿ ಹಾಗೂ ನಿರಂತರ ಕಲಿಕೆಯ ಹಂಬಲದಿಂದ ಜಾಗತಿಕ ಮಟ್ಟದ ಈ ಸಾಧನೆ ಮಾಡಿದ್ದಾರೆ.

ಚಿರಾಗ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಮುಖ ಅಂಗವಾದ ಮಷಿನ್ ಲರ್ನಿಂಗ್ಅನ್ನು ಸ್ವಯಂ ಅಧ್ಯಯನದ ಮೂಲಕ ಕರಗತ ಮಾಡಿಕೊಂಡಿದ್ದಾರೆ.