ಬೆಂಗಳೂರು(ಡಿ.03): ‘ಬುರೆವಿ’ ಚಂಡಮಾರುತದ ಪರಿಣಾಮ ಡಿ.6ರ ವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ಹಾಗೂ ಚಳಿಯ ವಾತಾವರಣ ಮುಂದುವರಿಯಲಿದೆ. ಎಲ್ಲ ಪ್ರದೇಶಗಳಲ್ಲಿ ತುಂತುರು ಮಳೆ ಬೀಳಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮುನ್ಸೂಚನೆ ನೀಡಿದೆ.

‘ಬುರೆವಿ’ ಡಿ.3ರಂದು ಭೂಸ್ಪರ್ಶ ಮಾಡಿದ್ದರ ಪರಿಣಾಮ ರಾಜಧಾನಿಯಲ್ಲಿ ಕೆಲವು ದಿನಗಳಿಂದ ಚಳಿ ಹಾಗೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಉಷ್ಣಾಂಶ ಕಡಿಮೆಯಾಗಿದ್ದು, ಅಲ್ಲಲ್ಲಿ ಸಾಮಾನ್ಯ ಹಾಗೂ ಸೋನೆ ಮಳೆ ಬಿದ್ದಿದೆ. ತಾಪಮಾನ ಗರಿಷ್ಠ 22 ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಡಿ.6ರವರೆಗೂ ಇದೇ ವಾತಾವರಣ ಮುಂದುವರಿಯಲಿದ್ದು, ಬಿಸಿಲಿನ ದರ್ಶನ ಅಪರೂಪ ಎನ್ನಬಹುದು. ಡಿ.7ರಿಂದ ಮೂರು ದಿನ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗಿ ಬಳಿಕ ವಾತಾವರಣ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ.

ಜನರೇ ಕೊರೆವ ಚಳಿ ಬಗ್ಗೆ ಎಚ್ಚರ! ಹೇಗೆ ಕಾಪಾಡಿಕೊಳ್ಳಬೇಕು ಆರೋಗ್ಯ..?

ತುಂತುರು ಮಳೆ:

ನಗರದಲ್ಲಿ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಗುರುವಾರ ಬೆಳಗ್ಗೆಯಿಂದಲೇ ಬಹುತೇಕ ಎಲ್ಲ ಪ್ರದೇಶಗಳಲ್ಲಿ ತುಂತುರು ಮಳೆ ಬಿದ್ದಿದೆ. ತಾವರೆಕೆರೆಯಲ್ಲಿ ಅಧಿಕ 3.5 ಮಿ.ಮೀ ಮಳೆಯಾಗಿದ್ದು ಬಿಟ್ಟರೆ ಎಲ್ಲಿಯೂ ದಾಖಲೆ ಮಳೆಯಾಗಿಲ್ಲ. ರಾಜಾನುಕುಂಟೆ, ಯಲಹಂಕ, ಗಂಟಿಗಾನಹಳ್ಳಿ, ಲಕ್ಕಸಂದ್ರ, ಚೋಳನಾಯಕನಹಳ್ಳಿ, ಅಂಜನಾಪುರ, ಹೊರಮಾವು, ಜಯನಗರ, ಚಾಮರಾಜಪೇಟೆ, ಮೆಜೆಸ್ಟಿಕ್‌, ವಿಜಯನಗರ, ಮೈಸೂರು ರಸ್ತೆಗಳಲ್ಲಿ ಸೋನೆ ಮಳೆ ಸುರಿದಿದೆ. ಆಗಾಗ ಬಂದ ಜಿಟಿಜಿಟಿ ಮಳೆಯಿಂದ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಮಳೆ, ಚಳಿ ಮಧ್ಯೆ ಜರ್ಕಿನ್‌, ಕೊಡೆ ಆಸರೆಯಿಂದ ಜನ ನಗರದಲ್ಲಿ ಓಡಾಡಿದ್ದು ಸಾಮಾನ್ಯವಾಗಿತ್ತು.