ಬೆಂಗಳೂರು (ನ.30):  ಚಳಿಗಾಲದ ವೇಳೆಯಲ್ಲೇ ಎರಗಿರುವ ಚಂಡಮಾರುತ ಸೇರಿದಂತೆ ವಾತಾವರಣದಲ್ಲಿ ಉಂಟಾಗುತ್ತಿರುವ ನಿರಂತರ ಬದಲಾವಣೆಯಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣದ ಏರ್ಪಟ್ಟಿದೆ. ಜೊತೆಗೆ ತೇವಾಂಶ ಸಹಿತ ಗಾಳಿಯಿಂದಾಗಿ ಚಳಿ ಅನುಭವ ತೀವ್ರಗೊಂಡಿದ್ದು ದಿನದಿಂದ ದಿನಕ್ಕೆ ಚಳಿ ಮೈ ಕೊರೆಯುತ್ತಿದೆ.

- ಕೊರೋನಾ ಕಾಲದಲ್ಲಿನ ಈ ಚಳಿಯ ತೀವ್ರತೆಯು ಹಲವು ಅನಾರೋಗ್ಯ ಸಮಸ್ಯೆಗಳಿಗೂ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಮೇಲೆ ಹೆಚ್ಚು ಪ್ರಭಾವ ಬೀರುವ ಬಂಗಾಳಕೊಲ್ಲಿ ಭಾಗದಲ್ಲಿ ಮುಂಗಾರು ಆರಂಭದಿಂದಲೂ ನಿರಂತರವಾಗಿ ವಾಯುಭಾರ ಕುಸಿತ (ಸ್ಟ್ರಫ್‌) ಉಂಟಾಗುತ್ತಲೇ ಇದೆ. ಸಮುದ್ರದ ಮೇಲೈ ಸುಳಿಗಾಳಿ ಹಾಗೂ ಅದರ ತೀವ್ರತೆಯಿಂದ ಹೆಚ್ಚು ಮಳೆ ಆಗಿದೆ. ಇದರ ಜೊತೆಗೆ ಬಂಗಾಳಕೊಲ್ಲಿ ಭಾಗದಿಂದ ತೇವಾಂಶ ಸಹಿತ ಮಾರುತಗಳು ತಮಿಳುನಾಡು ಮಾರ್ಗವಾಗಿ ರಾಜ್ಯದ ಮೇಲೆ ಬೀಸುತ್ತಿವೆ. ಇದರಿಂದ ಮಳೆಯ ಜೊತೆಗೆ ಚಳಿಯ ತೀವ್ರ ಅನುಭವವಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಳಿಗಾಲದಲ್ಲೇಕೆ ಮೂಲಂಗಿ ತಿನ್ಬೇಕು..? ಇಲ್ಲಿ ಓದಿ

ತಾಪಮಾನ ಇಳಿಕೆ:  ಹವಾಮಾನ ಬದಲಾವಣೆಗೆ ತಕ್ಕಂತೆ ನಗರದಲ್ಲಿ ತಾಪಮಾನ ಏರಿಳಿತ ಉಂಟಾಗುತ್ತಿದೆ. ನ.27ರಂದು ಹೆಚ್ಚು ಚಳಿ ಉಂಟಾಗಿದ್ದು ಅಂದು ತಾಪಮಾನ ಗರಿಷ್ಠ 20.7 ಮತ್ತು ಕನಿಷ್ಠ 17.3 ಡಿಗ್ರಿ ಸೆಲ್ಸಿಯಸ್‌ನಷ್ಟುದಾಖಲಾಗಿತ್ತು. ನವೆಂಬರ್‌ 29ರವರೆಗೆ ಕ್ರಮೇಣ ಕಡಿಮೆಯಾಗುತ್ತಿದ್ದರೂ, ಚಳಿಯ ಪ್ರಭಾವ ಇನ್ನೂ ಕುಗ್ಗಿಲ್ಲ. ಡಿ.2ರ ವೇಳೆಗೆ ತುಸು ಕಡಿಮೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊರೋನಾ ಬಗ್ಗೆ ಎಚ್ಚರ:  ರಾಜ್ಯದಲ್ಲಿ ಈಗಷ್ಟೇ ಕೊರೋನಾ ಇಳಿಮುಖವಾಗುತ್ತಿದ್ದು ಇದು ಶೀತ ಮೂಲದ ಸೋಂಕಾಗಿರುವುದರಿಂದ ಚಳಿಗಾಲದಲ್ಲಿ ಎಚ್ಚರ ವಹಿಸಬೇಕು. ಜೊತೆಗೆ ಚಳಿಯಿಂದಾಗಿ ವಿಷಮಶೀತ ಜ್ವರ, ಅಸ್ತಮಾ ಹಾಗೂ ನ್ಯುಮೋನಿಯಾ ರೋಗಿಗಳಲ್ಲಿ ರೋಗ ಉಲ್ಬಣದಂತಹ ಸಮಸ್ಯೆಗಳು ಉಂಟಾಗಿ ರೋಗ ನಿರೋಧಕ ಶಕ್ತಿ ಕುಸಿಯುವ ಸಾಧ್ಯತೆ ಇದೆ. ಇದರಿಂದ ಕೊರೋನಾಗೆ ಸುಲಭ ತುತ್ತಾಗಲಿದ್ದಾರೆ. ಹಾಗಾಗಿ ಚಳಿಯ ಬಗ್ಗೆ ಕೊರೋನಾ ಕಾಲದಲ್ಲಿ ತೀವ್ರ ಮುನ್ನೆಚ್ಚರಿಕೆ ಅಗತ್ಯ ಎಂದು ಸರ್ಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅನ್ಸರ್‌ ಅಹಮದ್‌ ಹೇಳುತ್ತಾರೆ.

ಬೆಳ್ಳಬೆಳಗ್ಗೆ, ಸಂಜೆ ವಾಕಿಂಗ್‌ ಬೇಡ

ಚಳಿಯ ವೇಳೆ ಹೃದಯಾಘಾತಗಳು ಹೆಚ್ಚಾಗುವುದರಿಂದ ಬೆಚ್ಚನೆಯ ವಾತಾವರಣ ಸೃಷ್ಟಿಸಿಕೊಳ್ಳಬೇಕು. ಮುಂಜಾಗ್ರತೆ ದೃಷ್ಟಿಯಿಂದ ಬೆಳಗಿನ ವಾಕಿಂಗ್‌, ಸಂಜೆ ಆರು ಗಂಟೆ ನಂತರ ಹೊರ ಹೋಗುವುದನ್ನು ಆದಷ್ಟೂನಿಲ್ಲಿಸಬೇಕು. ಆದಷ್ಟುದೇಹ ಬಿಸಿಯಾಗಿರುವಂತೆ ನೋಡಿಕೊಳ್ಳಬೇಕು.

ಹೊರಗಿನದು ಹೆಚ್ಚು ತಿನ್ನಬೇಡಿ

ಹೊರಗಿನ ತಿಂಡಿ ತಿನಿಸು, ಎಣ್ಣೆ ಪದಾರ್ಥ ಹಾಗೂ ಮಾಂಸಹಾರ ಸೇವನೆ ಹೆಚ್ಚಾಗಿ ಮಾಡಬಾರದು. ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ತರಕಾರಿಗಳು, ಹಣ್ಣು, ಕಾಳಿನ ಪದಾರ್ಥ ಸೇವಿಸಬೇಕು. ಬಿಸಿ ನೀರು ಕುಡಿಯುವುದನ್ನು ತಪ್ಪದೇ ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅನ್ಸರ್‌ ಅಹಮದ್‌.

ಹೃದಯ ಆರೋಗ್ಯದ ಬಗ್ಗೆ ಎಚ್ಚರವಹಿಸಿ

‘ಚಳಿ ಹೆಚ್ಚಿದ್ದಾಗ ತೀವ್ರ ಚಳಿಯಿಂದ ಹೃದಯದ ಅಪಧಮನಿಗಳು ಪೆಡಸಾಗುತ್ತವೆ. ಆಗ ರಕ್ತದೊತ್ತಡ ಮತ್ತು ಪ್ರೊಟೀನ್‌ ಪ್ರಮಾಣ ಹೆಚ್ಚಾಗಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಹೃದಯಾಘಾತದಂಥ ಸಮಸ್ಯೆಗಳು ಎದುರಾಗುತ್ತವೆ. ಅಸ್ತಮಾ ರೋಗಿಗಳಿಗೂ ತೊಂದರೆ ಹೆಚ್ಚು. ಹೀಗಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ 60 ವರ್ಷ ಮೇಲ್ಪಟ್ಟವರು ಜೊತೆಗೆ ಆರು ವರ್ಷದ ಒಳಗಿನ ಮಕ್ಕಳು ವಿಶೇಷ ಕಾಳಜಿ ವಹಿಸಬೇಕು’ ಎನ್ನುತ್ತಾರೆ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ

ಸಿ.ಎನ್‌.ಮಂಜುನಾಥ್‌.