Asianet Suvarna News Asianet Suvarna News

ಆಟವಾಡುತ್ತಾ ಹೋಗಿ ರಾತ್ರಿಯಿಡೀ ಕಾರಿನಲ್ಲಿ ಲಾಕ್‌ ಆದ ಮಕ್ಕಳು

ಆಟವಾಡುತ್ತಾ ಹೋದ ಇಬ್ಬರು ಬಾಲಕರು ಕಾರಿನ ಒಳಗಡೆ ಸೇರಿ ಲಾಕ್‌ ಆಗಿ ರಾತ್ರಿ ಪೂರ್ತಿ ಕಳೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.    ಸುಸ್ತಾದಂತೆ ಕಂಡು ಬಂದ ಬಾಲಕರನ್ನು ತಕ್ಷಣವೇ ವೈದ್ಯರ ಕರೆಯಿಸಿ ತಪಾಸಣೆ ನಡೆಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Children Locked in Car hole night  At chitradurga snr
Author
Bengaluru, First Published Feb 25, 2021, 8:02 AM IST

ಚಿತ್ರದುರ್ಗ (ಫೆ.25):  ಆಟವಾಡುತ್ತಾ ಹೋದ ಇಬ್ಬರು ಬಾಲಕರು ಕಾರಿನ ಒಳಗಡೆ ಸೇರಿ ಲಾಕ್‌ ಆದ ಘಟನೆ ಮೊಳಕಾಲ್ಮೂರು ತಾಲೂಕಿನ ಕೆರೆಕೊಂಡಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ವಸಂತ ಎಂಬುವರ ನಾಲ್ಕು ವರ್ಷದ ಲಿಂಕೇಶ್‌ ಹಾಗೂ ರುದ್ರಪ್ಪ ಎಂಬುವರ ಆರು ವರ್ಷದ ಮಗ ಜೀವನ್‌ ಕಾರ್‌ ಒಳಗಡೆ ಲಾಕ್‌ ಆದ ಬಾಲಕರು. ಸೋಮವಾರ ಸಂಜೆ ಆಟವಾಡುತ್ತಾ ಸಮೀಪದಲ್ಲೇ ನಿಲ್ಲಿಸಲಾಗಿದ್ದ ಕಾರ್‌ ಬಳಿ ಹೋಗಿ ಅದರ ಒಳ ಹೊಕ್ಕು ಬಾಗಿಲು ಹಾಕಿಕೊಂಡಿದ್ದಾರೆ. ನಂತರ ಹೊರ ಬಾರದೆ ಪೇಚಿಗೆ ಸಿಲುಕಿದ್ದಾರೆ.

ಸಂಜೆ ಆಟವಾಡುತ್ತಿದ್ದ ಮಕ್ಕಳು ಕಾಣೆಯಾಗಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಊರಲ್ಲಿ ಎಲ್ಲ ಕಡೆ ಹುಡುಕಾಡಿ ಅಂತಿಮವಾಗಿ ರಾಂಪುರ ಠಾಣೆ ಪೊಲೀಸರಿಗೆ ದೂರು ನೀಡಿ, ಮಕ್ಕಳು ಅಪಹರಣವಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲ ಕಡೆ ಹುಡುಕಾಟ ಆರಂಭಿಸಿದ್ದಾರೆ.

ಗಾಜಿನ ಚೂರಿಂದ ಪತ್ತೆಯಾಯ್ತು ಸ್ವಿಗ್ಗಿ ಹುಡುಗರ ಕೊಂದ ಕಾರು..! ...

ಗ್ರಾಮದ ಆಸುಪಾಸಿನಲ್ಲಿರುವ ಎಲ್ಲ ಕೆರೆ, ಕಟ್ಟೆ, ಬಾವಿಗಳನ್ನು ತಲಾಶ್‌ ಮಾಡಿದ್ದಾರೆ. ಎಲ್ಲಿಯೂ ಮಕ್ಕಳು ಕಾಣಸಿಗಲಿಲ್ಲ. ತಡರಾತ್ರಿವರೆಗೂ ಹುಡುಕಾಟ ನಡೆಸಿದ ಪೊಲೀಸರಿಗೆ ಇದೊಂದು ಸವಾಲಿನ ಪ್ರಕರಣವಾಗಿ ಗೋಚರಿಸಿತ್ತು. ಮರುದಿನ ಮುಂಜಾನೆ ಅಂದರೆ ಮಂಗಳವಾರ ಮಕ್ಕಳು ಆಟವಾಡಲು ಹೋಗಿದ್ದ ಸ್ಥಳದ ಸಮೀಪ ಬಹಳ ದಿನಗಳಿಂದ ಕಾರೊಂದನ್ನು ನಿಲ್ಲಿಸಲಾಗಿದ್ದು, ಅದರ ಒಳಭಾಗ ಮಿಸುಕಾಡುತ್ತಿದ್ದ ದೃಶ್ಯ ಕಂಡು ಗ್ರಾಮಸ್ಥ ರು ಬಾಗಿಲು ತೆರೆದಾಗ ಬಾಲಕರು ಪತ್ತೆಯಾಗಿದ್ದಾರೆ.

ತೀರಾ ಸುಸ್ತಾದಂತೆ ಕಂಡು ಬಂದ ಬಾಲಕರನ್ನು ತಕ್ಷಣವೇ ವೈದ್ಯರ ಕರೆಯಿಸಿ ತಪಾಸಣೆ ನಡೆಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಸು ತಡವಾಗಿದ್ದರೆ ಬಾಲಕರು ಉಸಿರುಗಟ್ಟಿಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಬಾಲಕರು ಕಣ್ಮಮರೆಯಾದ ನಂತರ ರಾಂಪುರ ಪೊಲೀಸರು ತುಂಬಾ ಆತಂಕ್ಕೆ ಒಳಗಾಗಿದ್ದರು. ಮಕ್ಕಳು ಸುರಕ್ಷಿತವಾಗಿ ದೊರಕಿರುವುದು ನಿಟ್ಟುಸಿರು ಬಿಡುವಂತಾಗಿದೆ ಎಂದು ಎಸ್ಪಿ ರಾಧಿಕಾ ತಿಳಿಸಿದ್ದಾರೆ.

Follow Us:
Download App:
  • android
  • ios