ಗಾಜಿನ ಚೂರಿಂದ ಪತ್ತೆಯಾಯ್ತು ಸ್ವಿಗ್ಗಿ ಹುಡುಗರ ಕೊಂದ ಕಾರು..!
ಯುವಕರನ್ನು ಬಲಿ ಪಡೆದ ಕಾರಿನ ಸುಳಿವು ನೀಡಿದ ನಂಬರ್ ಪ್ಲೇಟ್| ತಡರಾತ್ರಿ ಊಟ ಪಾರ್ಸಲ್ ನೀಡಿ ಹೊರಟ ಸ್ವಿಗ್ಗಿ ಯುವಕರ ಸ್ಕೂಟರ್‌ಗೆ ಕಾರು ಹಿಟ್ ಆ್ಯಂಡ್ ರನ್| ತುಂಡಾಗಿ ಬಿದ್ದಿದ್ದ ಕಾರಿನ ಚೂರು ಹಿಡಿದು ಪೊಲೀಸರ ಶೋಧ| ಟ್ರಾವೆಲ್ಸ್ ಏಜೆನ್ಸಿಯ ಮಾಲೀಕನ ಸೆರೆ|
ಬೆಂಗಳೂರು(ಫೆ.25): ಜಾಲಹಳ್ಳಿ ಸಮೀಪದ ಎಚ್‌ಎಂಟಿ ಕಾರ್ಖಾನೆ ಲಿಂಕ್ ರಸ್ತೆಯಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣದ ಕಾರಿನ ಚೂರಾದ ನಂಬರ್ ಪ್ಲೇಟ್ ಆಧರಿಸಿ ಕೊನೆಗೂ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶವಂತಪುರ ಸಂಚಾರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾದನಾಯಕನಹಳ್ಳಿಯ ಟ್ರಾವೆಲ್ಸ್ ಏಜೆನ್ಸಿ ಮಾಲೀಕ ಭರತ್ ಬಂಧಿತನಾಗಿದ್ದು, ಎಚ್‌ಎಂಟಿ ಫ್ಯಾಕ್ಟರಿ ಲಿಂಕ್ ರಸ್ತೆಯಲ್ಲಿ ಊಟ ಪಾರ್ಸಲ್ ತೆಗೆದುಕೊಂಡು ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ. ಅಪಘಾತ ಎಸಗಿದ್ದ ಕಾರನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಚ್‌ಎಂಟಿ ಫ್ಯಾಕ್ಟರಿ ಲಿಂಕ್ ರಸ್ತೆ ಮೂಲಕ ತುಮಕೂರು ರಸ್ತೆ ಕಡೆಗೆ ಮಂಗಳವಾರ ನಸುಕಿನ 1.15ರ ಸಮಯದಲ್ಲಿ ಸ್ವಿಗ್ಗಿ ಕಂಪನಿ ಫುಡ್ ಸಪ್ಲೈಯರ್ ಗೌತಮ್ ಹಾಗೂ ಆತನ ಸ್ನೇಹಿತ ಶ್ರೀಕಾಂತ್ (27) ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಭರತ್, ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಪರಾರಿಯಾಗಿದ್ದ. ಈ ಘಟನೆಯಲ್ಲಿ ಗೌತಮ್ ಹಾಗೂ ಅವರ ಗೆಳೆಯ ಶ್ರೀಕಾಂತ್ ಮೃತಪಟ್ಟಿದ್ದರು. ಈ ಹಿಟ್ ಆ್ಯಂಡ್ ರನ್ ಬಗ್ಗೆ ತನಿಖೆ ಆರಂಭಿಸಿದ ಯಶವಂತಪುರ ಪೊಲೀಸರು, ಸ್ಥಳದಲ್ಲಿ ಸಿಕ್ಕ ಕಾರಿನ ಬಿಡಿ ಭಾಗಗಳು, ನಂಬರ್ ಪ್ಲೇಟ್ ಚೂರು ಮತ್ತು ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯಕ್ಕೆ ವಶಕ್ಕೆ ಆಧರಿಸಿ ಇನ್‌ಸ್ಪೆಕ್ಟರ್ ಪ್ರೀತಮ್ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ನನ್ನ ಪತ್ನಿ ಜೊತೆ ಮಾತಾಡ್ಬೇಡ ಎಂದು ಜಗಳ ಶುರು, ಕೊನೆಯಾಗಿದ್ದು ಕೊಲೆಯಲ್ಲಿ
ಚೂರುಗಳು ಹೇಳಿದ ಸತ್ಯ
ಜೆ.ಸಿ.ರಸ್ತೆಯಲ್ಲಿರುವ ಪ್ಲೇಟ್ ಮತ್ತು ಸ್ಟೀಕರ್ ಅಂಗಡಿಗಳನ್ನು ಸಂಪರ್ಕಿಸಿ ಸಬ್ ಇನ್‌ಸ್ಪೆಕ್ಟರ್ ಹನುಮಂತರಾಜು ನೇತೃತ್ವದ ತಂಡ, ಅಪಘಾತಕ್ಕೀಡಾಗಿದ್ದ ಕಾರಿನ ಮುಂಭಾಗದ ಬಿಡಿ ಭಾಗಗಳನ್ನು ಪರಿಶೀಲಿಸಿದಾಗ ಕೃತ್ಯ ಎಸಗಿದ್ದು ಶೆವಾರ್ಲೆ ಕ್ಯಾಪ್ಟಿವಾ ಕಾರು ಎಂಬುದು ಗೊತ್ತಾಗಿದೆ. ಈ ಸುಳಿವಿನ ಕಾರ್ಯಪ್ರವೃತ್ತರಾದ ಪೊಲೀಸರು, ಚೂರಾದ ನಂಬರ್ ಪ್ಲೇಟ್ ಮೂಲಕ ಶೆವಾರ್ಲೆ ಕ್ಯಾಪ್ಟಿವಾ ಬಗ್ಗೆ ಆರ್‌ಟಿಓ ಕಚೇರಿಯಲ್ಲಿ ಮಾಹಿತಿ ಶೋಧಿಸಿದ್ದಾರೆ. ಆಗ 15 ಕಾರುಗಳ ಮಾಹಿತಿ ಲಭ್ಯವಾಗಿದೆ. ಆ ಕಾರುಗಳ ಮಾಲೀಕರ ವಿಳಾಸ ಪಡೆದು ಪರಿಶೀಲಿಸಿದಾಗ ಭರತ್ ಮೇಲೆ ಶಂಕೆ ಮೂಡಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಪ್ರಶ್ನಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ನೇಹಿತನ ಮೇಲೆ ಸುಳ್ಳು ಆರೋಪ
ತನ್ನ ಸ್ನೇಹಿತ ಮದುವೆ ಸಲುವಾಗಿ ಮಂಗಳವಾರ ಕಾರು ತೆಗೆದುಕೊಂಡಿದ್ದ. ಘಟನೆ ಬಳಿಕ ಕಾರನ್ನು ಟಿಪಿಐನ ಫಾಸ್ಟ್ ಫೈ ರೇಸಿಂಗ್ ಗ್ಯಾರೇಜ್ ಬಳಿ ಬಿಟ್ಟು ಹೋಗಿದ್ದಾಗಿ ಆರಂಭದಲ್ಲಿ ಭರತ್ ಸುಳ್ಳು ಹೇಳಿದ್ದ. ಅದರಂತೆ ಮಂಡ್ಯಕ್ಕೆ ಹೋಗಿ ಆರೋಪಿಯ ಸ್ನೇಹಿತನ್ನು ವಶಕ್ಕೆ ಪಡೆದು ಬುಧವಾರ ಕರೆತಂದು ಇಬ್ಬರನ್ನು ಮುಖಾಮುಖಿ ಪ್ರಶ್ನಿಸಲಾಯಿತು. ಅಂತಿಮವಾಗಿ ನಾನೇ ಅಪಘಾತ ಮಾಡಿದ್ದು ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.