ಕೊರೋನಾ ಕಾಲ​ದಲ್ಲಿ ಹೆಚ್ಚು​ತ್ತಿ​ವೆ ಬಾಲ್ಯವಿವಾಹ !

  • ಜಿಲ್ಲೆ​ಯಲ್ಲಿ ಕಳೆದ ಒಂದೂ​ವರೆ ವರ್ಷ​ದಿಂದ ಬಾಲ್ಯ ವಿವಾಹ ಪ್ರಕ​ರ​ಣ ಏರಿಕೆ
  • ಗ್ರಾಮೀಣ ಭಾಗದಲ್ಲಿ ಹಲವು ಬಾಲ್ಯ ವಿವಾಹಗಳು ಬೆಳಕಿಗೆ 
  • ಕೊಂಡು 2020 ಹಾಗೂ 2021ರ ಸಾಲಿ​ನ​ಲ್ಲಿಯೇ ಅತಿ ಹೆಚ್ಚು ಪ್ರಕ​ರ​ಣ​ಗಳು ದಾಖ​ಲು
Child marriage Cases rise in Ramanagara snr

ವರದಿ :  ಎಂ.ಅ​ಫ್ರೋಜ್‌ ಖಾನ್‌

 ರಾಮ​ನ​ಗರ (ಜೂ.28):  ಕೊರೋನಾ ಮೊದ​ಲ ಹಾಗೂ ಎರ​ಡನೇ ಅಲೆ ಕಾಣಿ​ಸಿ​ಕೊಂಡ ನಂತರ ಜಿಲ್ಲೆ​ಯಲ್ಲಿ ಕಳೆದ ಒಂದೂ​ವರೆ ವರ್ಷ​ದಿಂದ ಬಾಲ್ಯ ವಿವಾಹ ಪ್ರಕ​ರ​ಣ​ಗಳು ಹೆಚ್ಚಾ​ಗು​ತ್ತಿವೆ.

ಕೊರೋನಾ ಸೋಂಕಿನ ಅಲೆ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿ​ಸಲು ಸಭೆ ಸಮಾರಂಭ, ಮದುವೆ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಸಂಪೂರ್ಣ ನಿಷೇಧಿಸಿರುವ ಮಧ್ಯೆಯೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಲವು ಬಾಲ್ಯ ವಿವಾಹಗಳು ಬೆಳಕಿಗೆ ಬಂದಿವೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಹಿತಿ ಪ್ರಕಾರ ಕಳೆದ ಐದು ವರ್ಷ​ಗ​ಳ ಬಾಲ್ಯ ವಿವಾಹ ಪ್ರಕ​ರ​ಣದ ಅಂಕಿ ಅಂಶ​ಗ​ಳನ್ನು ಅವ​ಲೋ​ಕಿ​ಸಿ​ದರೆ ಕೊರೋನಾ ಸೋಂಕು ಕಾಣಿ​ಸಿ​ಕೊಂಡು 2020 ಹಾಗೂ 2021ರ ಸಾಲಿ​ನ​ಲ್ಲಿಯೇ ಅತಿ ಹೆಚ್ಚು ಪ್ರಕ​ರ​ಣ​ಗಳು ದಾಖ​ಲಾ​ಗಿರುವುದು ಗಮ​ನಾ​ರ್ಹ​ವಾ​ಗಿ​ದೆ.

ಮೈಸೂರು: SSLC ವಿದ್ಯಾರ್ಥಿನಿಯ ಬಾಲ್ಯ ವಿವಾಹ ತಡೆದ ಸ್ನೇಹಿತೆ ..

114 ಬಾಲ್ಯ ವಿವಾಹ ತಡೆ:

2017ರಲ್ಲಿ 05 ಬಾಲ್ಯ ವಿವಾಹ ತಡೆ​ದಿ​ದ್ದರೆ 2018ರಲ್ಲಿ 08, 2019ರಲ್ಲಿ 24 ಬಾಲ್ಯ ವಿವಾ​ಹ​ಗ​ಳಿಗೆ ಕಡಿ​ವಾಣ ಹಾಕ​ಲಾ​ಗಿದೆ. ಕೊರೋನಾ ಮೊದಲ ಅಲೆ ಕಾಣಿ​ಸಿ​ಕೊಂಡ ತರು​ವಾಯ 2020ರ ಏಪ್ರಿಲ್‌ನಿಂದ 2021ರ ಮಾಚ್‌ರ್‍ವರೆಗೆ ಒಟ್ಟು 100 ಬಾಲ್ಯ ವಿವಾ​ಹ​ಗ​ಳ​ನ್ನು ತಡೆ ಹಿಡಿ​ಯ​ಲಾ​ಗಿದ್ದು, 11 ಮದು​ವೆ​ಗಳು ನೆರ​ವೇ​ರಿ​ವೆ. 10 ಮಂದಿ ವಿರುದ್ಧ ಪೋಕ್ಸೊ ಪ್ರಕ​ರಣ ದಾಖ​ಲಾ​ಗಿ​ದೆ. ಇನ್ನು ಕೊರೋನಾ ಎರ​ಡನೇ ಅಲೆ ವೇಳೆ ಜನತಾ ಕಫä್ಯ​ರ್‍, ಲಾಕ್‌ಡೌನ್‌ ಜಾರಿ ಸಂದ​ರ್ಭ​ದ​ಲ್ಲಿಯೇ 2021ರ ಏಪ್ರಿಲ್‌ - ಜೂನ್‌ ವರೆಗೆ 14 ಬಾಲ್ಯ ವಿವಾ​ಹ​ಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟ​ಕ​ ಅ​ಧಿ​ಕಾ​ರಿ​ಗಳು ತಡೆ ಹಿಡಿದು, 02 ಪ್ರಕ​ರ​ಣ​ಗ​ಳಲ್ಲಿ ಎಫ್‌ಐಆರ್‌ ದಾಖ​ಲಾ​ಗಿದೆ.

ಗ್ರಾಮೀಣ ಭಾಗದಲ್ಲೆ ಹೆಚ್ಚು:

ಕೊರೋನಾ ಹಿನ್ನೆ​ಲೆ​ಯಲ್ಲಿ ಒಂದೂ​ವರೆ ವರ್ಷ​ದಿಂದ ಶಾಲಾ - ಕಾಲೇ​ಜು​ಗಳು ಬಂದ್‌ ಆಗಿ​ರು​ವುದೇ ಬಾಲ್ಯ ವಿವಾಹ ಹೆಚ್ಚ​ಳ​ವಾ​ಗಲು ಕಾರ​ಣ​ವಾ​ಗಿದೆ. ಶಿಕ್ಷ​ಣ​ದಿಂದ ದೂರ​ವಾದ ಹೆಣ್ಣು ಮಕ್ಕ​ಳನ್ನು ಪೋಷ​ಕರು ವಿವಾಹ ಬಂಧ​ನ​ಕ್ಕೊ​ಳ​ಪ​ಡಿ​ಸಿ ಜವಾ​ಬ್ದಾ​ರಿ​ಯಿಂದ ನುಣುಚಿಕೊಳ್ಳಲು ಮುಂದಾ​ಗು​ತ್ತಿ​ದ್ದಾರೆ. ಒಂದ​ರ್ಥ​ದಲ್ಲಿ ಕೊರೋನಾ ಸೋಂಕು ಮಕ್ಕಳ ಭವಿಷ್ಯದ ಮೇಲೆ ಕರಾಳ ಛಾಯೆ ಮೂಡಿ​ಸಿ​ದೆ. ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ ಪ್ರಕ​ರ​ಣಗಳು ಕಂಡು ಬಂದಿವೆ. ಬಾಲ್ಯ ವಿವಾಹ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಕೆಲವೆಡೆ ಮದುವೆಗಳು ನಡೆದಿದ್ದರೆ, ಇನ್ನೂ ಕೆಲವೆಡೆ ಅಧಿಕಾರಿಗಳು ವಿವಾಹ ತಡೆದು ಪಾಲಕ, ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಬಾಲ್ಯವಿವಾಹ ತಡೆಗೆ ಆಹ್ವಾನ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ! ..

ಆಡುತ್ತ, ನಲಿಯುತ್ತ ತಮ್ಮ ಬಾಲ್ಯವನ್ನು ಅನುಭವಿಸಬೇಕಿದ್ದ ಪುಟಾಣಿಗಳ ಸಂತೋಷವನ್ನು ಕೊರೋನಾ ಕಸಿದುಕೊಂಡಿದೆ. ವಯಸ್ಸಿಗೆ ಬಾರದ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿ​ದ್ದಾರೆ. ಅದರಲ್ಲೂ ಲಾಕ್‌ ಡೌನ್‌ ಹಾಗೂ ಕೊರೋನಾ ಸಂಕಷ್ಟದ ಸಮಯದಲ್ಲೇ ಹೆಚ್ಚು ಬಾಲ್ಯ ವಿವಾಹಗಳು ಕಂಡು ಬರು​ತ್ತಿವೆ.

ವಿವಾಹ ನಂತರ ಪ್ರಕರಣಗಳು

ಜಿಲ್ಲೆಯಲ್ಲಿನ ಕಳೆದ ಐದು ವರ್ಷ​ಗಳ ಅಂಕಿ ಅಂಶವನ್ನು ಗಣನೆಗೆ ತೆಗೆದುಕೊಂಡರೇ, ಬಹುತೇಕ ವಿವಾಹ ನಂತರ ದೂರು ದಾಖಲಾಗಿವೆ. ಅದರಲ್ಲೂ ಮದುವೆಯ ನಂತರ ಗರ್ಭಧಾರಣೆ, ಮಗುವಿಗೆ ಜನ್ಮ ನೀಡಿರುವಂತಹದ್ದು, ಜತೆಗೆ, ಗರ್ಭಪಾತ ನಡೆದಿರುವ ಘಟನೆಗಳೇ ಹೆಚ್ಚಾಗಿವೆ. ಈ ಕುರಿತು 2017ರಲ್ಲಿ 12 ಮಂದಿ ವಿರುದ್ಧ ದೂರು ದಾಖಲಾಗಿದ್ದರೆ, 2018ರಲ್ಲಿ 18 ಮಂದಿ, ಇನ್ನು 2019ರಲ್ಲಿ 57 ಮಂದಿಯ ವಿರುದ್ಧ ದೂರು ದಾಖಲಾಗಿದ್ದರೆ, 2020ರಲ್ಲಿ 11 ಹಾಗೂ 2021ರಲ್ಲಿ 02 ಮಂದಿ ವಿರುದ್ಧ ಪ್ರಕ​ರಣ ದಾಖ​ಲಾ​ಗಿರುವುದು ಬೆಳಕಿಗೆ ಬಂದಿದೆ. ಬಾಲ್ಯ ವಿವಾಹ ತಡೆ ಕಾಯ್ದೆ ಜತೆಗೆ, ಪೋಕ್ಸೊ ಕಾಯ್ದೆಯಡಿ 2018ರಿಂದ 2019ರವರೆಗೆ ಕ್ರಮವಾಗಿ 3, 5 ಹಾಗೂ 16 ಮಂದಿ ವಿರುದ್ಧ ದೂರು ದಾಖಲಾಗಿವೆ. ಲಾಕ್‌ ಡೌನ್‌ ಅವ​ಧಿ​ಯಲ್ಲಿ 2020ರಲ್ಲಿ 10 ಹಾಗೂ 2021ರಲ್ಲಿ 02 ಮಂದಿ ವಿರುದ್ಧ ಪ್ರಕ​ರಣ ದಾಖ​ಲಾ​ಗಿದೆ.

ವರ್ಷ 2017 2018 2019 2020 2021 (ಏಪ್ರಿಲ್‌ -ಜೂನ್‌)

ಬಾಲ್ಯ ವಿವಾಹ ತಡೆ ಪ್ರಕ​ರ​ಣ 05 08 24 100 14

ಜನರ ಮೇಲಿನ ಪ್ರಕ​ರಣ 12 18 57 11 02

ಬಾಲ್ಯ ವಿವಾಹ /ಪೋಕ್ಸೊ 03 05 16 10 02

Latest Videos
Follow Us:
Download App:
  • android
  • ios