ರಾಯಚೂರಲ್ಲಿ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತ..!
ಹೆಸರಿಗೆ ಮಾತ್ರ ಅಧಿಕಾರಿಗಳ ದಾಳಿ ನಡೆಸಿ ಮಕ್ಕಳ ರಕ್ಷಣೆ, ರಾಯಚೂರು ಜಿಲ್ಲೆಯ ವಿವಿಧೆಡೆ 8 ಮಕ್ಕಳ ರಕ್ಷಣೆ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ನ.17): ರಾಯಚೂರು ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದೆ ಬಾಲ ಕಾರ್ಮಿಕರ ಪದ್ಧತಿ. ಸರ್ಕಾರ ಎಷ್ಟೇ ಕಠಿಣ ಕಾನೂನು ಜಾರಿ ಮಾಡಿದ್ರು. ನಿತ್ಯ ನೂರಾರು ಮಕ್ಕಳು ಶಾಲೆಗಳಿಗೆ ಚೆಕ್ಕರ್ ಹಾಕಿ ಪೋಷಕರ ಜೊತೆಗೆ ಕೂಲಿ ಕೆಲಸಗಳಿಗೆ ಹೋಗುವುದು ಸಾಮಾನ್ಯವಾಗಿ ಕಾಣುತ್ತೇವೆ. ಅದರಲ್ಲೂ ಸಿರವಾರ, ಕವಿತಾಳ ಮತ್ತು ದೇವದುರ್ಗ ತಾಲೂಕಿನಲ್ಲಿ ನಿತ್ಯವೂ ಗೂಡ್ಸ್ ವಾಹನಗಳಲ್ಲಿ ಮಕ್ಕಳು ಕೂಲಿ ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿ ಕಾಣಬಹುದಾಗಿದೆ.
ಈ ವಿಷಯ ರಾಯಚೂರು ಜಿಲ್ಲಾಡಳಿತಕ್ಕೂ ಗೊತ್ತಿದ್ರೂ ಹೆಸರಿಗೆ ಮಾತ್ರ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಮಾಡಿ ಸಭೆ ನಡೆಸಿ, ಆಗೊಮ್ಮೆ, ಈಗೊಮ್ಮೆ ಕೆಲ ವಾಹನಗಳನ್ನು ಹಿಡಿದು ಕೇಸ್ ಮಾಡಿ ಮಕ್ಕಳನ್ನು ರಕ್ಷಣೆ ಮಾಡುತ್ತಾರೆ. ಅದೇ ರೀತಿಯಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದ್ದು, ಗೂಡ್ಸ್ ವಾಹನಗಳಲ್ಲಿ ಮಕ್ಕಳನ್ನು ಕೆಲಸಕ್ಕಾಗಿ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಹಠಾತ್ ದಾಳಿ ನಡೆಸಿ 4 ವಾಹನಗಳನ್ನು ಜಪ್ತಿ ಮಾಡಿ 8 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಬಿಸಿಲೂರಿನ ದೇಗುಲಕ್ಕೆ ಸುಧಾಮೂರ್ತಿ ಭೇಟಿ: ಗಬ್ಬೂರಿನ ಲಕ್ಷ್ಮೀ ವೆಂಕಟೇಶ್ವರನಿಗೆ ವಿಶೇಷ ಪೂಜೆ
ಗಬ್ಬೂರು ವ್ಯಾಪ್ತಿಯ ಗಬ್ಬೂರು, ಸಿರವಾರ ಕ್ರಾಸ್, ಅಮರಪೂರ ಕ್ರಾಸ್, ಮಂದಕಲ್ ಕ್ರಾಸ್ ಮತ್ತು ಇತರೆ ಸ್ಥಳಗಳಲ್ಲಿ ಹಠಾತ್ ದಾಳಿ ಕೈಗೊಂಡಿದ್ದು, ಗೂಡ್ಸ್ ವಾಹನಗಳಲ್ಲಿ ಮಕ್ಕಳನ್ನು ಕೆಲಸಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದ 4 ವಾಹನಗಳನ್ನು ಜಪ್ತಿ ಮಾಡಿ, ಮೋಟಾರು ವಾಹನ ಕಾಯ್ದೆಯಡಿ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದರಿ ವಾಹನಗಳಿಂದ 8 ಮಕ್ಕಳನ್ನು ರಕ್ಷಣೆ ಮಾಡಿ, ಸಂಬಂಧಪಟ್ಟ ಶಾಲಾ ಮುಖ್ಯ ಗುರುಗಳು ಮತ್ತು ಸಿ.ಆರ್.ಪಿ ಸಮ್ಮುಖದಲ್ಲಿ ಮಕ್ಕಳನ್ನು ಪಾಲಕರಿಗೆ ಒಪ್ಪಿಸಲಾಯಿತು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಕೆಲಸಕ್ಕೆ ಕಳುಹಿಸದಂತೆ ಜಾಗೃತಿ ಮೂಡಿಸಲಾಯಿತು.
ಕೊಪ್ಪಳ ಸಂಸದ ಕರಡಿ ಸಂಗಣ್ಣರನ್ನು ಹುಡುಕಿ ಕೊಡಲು ಠಾಣೆಗೆ ದೂರು..!
ದಾಳಿಯ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥರೆಡ್ಡಿ ಉಪತಹಶೀಲ್ದಾರ್ ಬಸವರಾಜ, ಸಾರಿಗೆ ನಿರೀಕ್ಷಕ ನಾಗವಾಂದ, ಗಬ್ಬೂರು ಸಿಆರ್‌ಪಿ ಶಂಭುಲಿಂಗಪ, ಸುಂಕೇಶ್ವರಹಾಳ ಸಿಆರ್‌ಪಿ ವೆಂಕಟಾಜನೇಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಿಕ್ಕಯ್ಯ, ಮಕ್ಕಳ ಸಹಾಯವಾಣಿ ಕೇಂದ್ರದ ಕೆ.ತಾಯರಾಜ, ಡಾನ್‌ಬೋಸ್ಕೋ ಸಂಸ್ಥೆಯ ಅರುಣಕುಮಾರ, ಬಸವ ಮತ್ತು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಇನ್ನೂ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016 ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ರೂ ರಾಯಚೂರು ಜಿಲ್ಲೆಯಲ್ಲಿ ಮಕ್ಕಳನ್ನ ಶಾಲೆ ಬಿಡಿಸಿ ಪೋಷಕರು ಕೆಲಸಕ್ಕೆ ಕರೆದುಕೊಂಡು ಹೋಗುವ ಪದ್ಧತಿ ಇನ್ನೂ ಜೀವಂತವಾಗಿದೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಎಚ್ಚತ್ತುಕೊಂಡು ಮಕ್ಕಳು ಕೆಲಸ ಕಾರ್ಯಕ್ಕೆ ಹೋಗದಂತೆ ತಡೆಯುವುದರ ಜೊತೆಗೆ ಮಕ್ಕಳಿಂದ ಕೆಲಸ ಮಾಡಿಸುವ ಮಾಲೀಕರ ವಿರುದ್ಧವೂ ಸೂಕ್ತ ಕ್ರಮ ಜರುಗಿಸಬೇಕಾಗಿದೆ.