ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನಲ್ಲಿ ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡು, ಕೇವಲ ಐದು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವವರ ಸಜೀವ ದಹನಗೊಂಡಿದ್ದಾನೆ.

ಚಿಕ್ಕಮಗಳೂರು (ಅ.26): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಭಾನುವಾರ ಅತ್ಯಂತ ದಾರುಣ ರಸ್ತೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಮುಖಾಮುಖಿ ಡಿಕ್ಕಿಯ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡು, ನವವಿವಾಹಿತ ಯುವಕನೊಬ್ಬ ಬೆಂಕಿಯ ಜ್ವಾಲೆಯಲ್ಲಿ ಅರ್ಧಂಬರ್ಧ ಸುಟ್ಟು ರಸ್ತೆ ಮಧ್ಯದಲ್ಲೇ ಸಜೀವವಾಗಿ ದಹನಗೊಂಡ ಆಘಾತಕಾರಿ ಘಟನೆ ವರದಿಯಾಗಿದೆ.

ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿ ನಾಗರಾಜ್ (32) ಮೃತಪಟ್ಟ ದುರ್ದೈವಿ. ಕೇವಲ ಐದು ದಿನಗಳ ಹಿಂದಷ್ಟೇ ಹಸೆಮಣೆ ಏರಿ ನೂತನ ಜೀವನಕ್ಕೆ ಕಾಲಿಟ್ಟಿದ್ದ ನವವರ ನಾಗರಾಜ್, ಹೀಗೆ ದುರಂತವಾಗಿ ಪ್ರಾಣ ಕಳೆದುಕೊಂಡಿರುವುದು ಇಡೀ ತಾಲೂಕಿನಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.

ಘಟನೆಯ ವಿವರ - ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದ ಬೈಕ್!:

ಶೃಂಗೇರಿ ತಾಲೂಕಿನ 'ಮೆಣಸೆ' ಗ್ರಾಮದ ಬಳಿ ಈ ಭೀಕರ ಅಪಘಾತ ನಡೆದಿದೆ. ನಾಗರಾಜ್ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಜಯಪುರದಿಂದ ಶೃಂಗೇರಿ ಕಡೆಗೆ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ತಕ್ಷಣವೇ ರಸ್ತೆ ಮಧ್ಯದಲ್ಲೇ ಬೆ ಹೊತ್ತಿಕೊಂಡು ಭಸ್ಮವಾಗಲು ಪ್ರಾರಂಭಿಸಿದೆ. ಅಪಘಾತ ಸಂಭವಿಸಿದ ತಕ್ಷಣ ಬೈಕ್‌ನಿಂದ ಬಿದ್ದ ನಾಗರಾಜ್ ಅವರ ಮೇಲೆಯೂ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ಪರಿಣಾಮವಾಗಿ ಅವರು ರಸ್ತೆಯಲ್ಲೇ ಅರ್ಧಂಬರ್ಧ ಸುಟ್ಟುಹೋಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಂದಕಕ್ಕೆ ಉರುಳಿದ ಬಸ್ - ಪೊಲೀಸರ ತನಿಖೆ

ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್, ರಸ್ತೆ ಬದಿಯ ಆಳವಾದ ಕಂದಕಕ್ಕೆ ಇಳಿದು ನಿಂತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮದುವೆಯಾಗಿ ವಾರವೂ ಕಳೆಯುವ ಮುನ್ನವೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಹಾಗೂ ನವವಧುವಿನ ಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.