ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್ ಕೋಟೆ ಗಾಳಿಯಲ್ಲಿ ಗುಂಡು ಹಾರಿಸಿ ಹುಚ್ಚಾಟ ಮೆರೆದಿದ್ದಾರೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶದಲ್ಲಿ 5 ಸುತ್ತು ಫೈರಿಂಗ್ ಮಾಡಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷನ ಹುಚ್ಚಾಟದ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ. ಜನವಸತಿ ಪ್ರದೇಶದಲ್ಲೇ ಸಾರ್ವಜನಿಕರ ಜೀವಕ್ಕೆ ಕ್ಯಾರೇ ಎನ್ನದೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ನಡೆದಿದೆ.
5 ಸುತ್ತು ಗುಂಡು ಹಾರಾಟ
ಜೀವನ್ ಕೋಟೆ, ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ನಾಯಕ. ಈತ ಚಿಕ್ಕಮಗಳೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೀವನ್ ಕೋಟೆ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಬೆಚ್ಚಿಬಿದ್ದಿರುವ ಜನ
ಜನ ವಸತಿ ಪ್ರದೇಶದಲ್ಲಿ 5 ಸುತ್ತು ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಡಬಲ್ ಬ್ಯಾರಲ್ ಗನ್ ಅದಾಗಿದ್ದು, ಆಯುಧ ಪೂಜೆ ಹಿನ್ನೆಲೆ ಮನೆಯ ಮುಂಭಾಗದಲ್ಲಿ ಹುಚ್ಚಾಟ ಮರೆದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗುಂಡು ಹಾರಿಸಿದ ಅಕ್ಕಪಕ್ಕದಲ್ಲಿ ಮನೆಗಳಿವೆ. ಜನರು ಓಡಾಡುವ ಜಾಗದಲ್ಲೇ ಫೈರಿಂಗ್ ಮಾಡಲಾಗಿದೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಈ ರೀತಿ ಜನರನ್ನು ಭಯ ಬೀಳಿಸೋದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.
ಇನ್ನು, ಜೀವನ್ ಕೋಟೆ ರಾಜಾರೋಷವಾಗಿ ಬಂದೂಕುಗಳಿಂದ ಗುಂಡು ಹಾರಿಸುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರ ಕಾರ್ಯವೈಖರಿ ಮೇಲೂ ಸಾರ್ವಜನಿಕರು ಕಣ್ಣಿಟ್ಟಿದ್ದಾರೆ.


