ಕರ್ನಾಟಕದ ವಾಯುಯಾನ ಸಂಪರ್ಕವನ್ನು ಗಟ್ಟಿಗೊಳಿಸಲು ಚಿಕ್ಕಮಗಳೂರು, ಹಂಪಿ ಮತ್ತು ಮಡಿಕೇರಿಯಲ್ಲಿ ಏರ್ಸ್ಟ್ರಿಪ್ ಹಾಗೂ ಹೆಲಿಪೋರ್ಟ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ.
ಬೆಂಗಳೂರು: ರಾಜ್ಯದ ವಾಯುಯಾನ ಸಾರಿಗೆ ಸಂಪರ್ಕ ಗಟ್ಟಿಗೊಳಿಸಲು ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ರಾಜ್ಯದ ಚಿಕ್ಕಮಗಳೂರು, ಹಂಪಿ, ಮಡಿಕೇರಿಯಲ್ಲಿ ಏರ್ಸ್ಟ್ರಿಪ್-ಹೆಲಿಪೋರ್ಟ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲು ಮುಂದಾಗಿದೆ.
ಚಿಕ್ಕಮಗಳೂರು, ಹಂಪಿ, ಮಡಿಕೇರಿಯಲ್ಲಿ ಏರ್ಸ್ಟ್ರಿಪ್-ಹೆಲಿಪೋರ್ಟ್
ರಾಜ್ಯದ ಪ್ರಮುಖ ನಗರಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಮೂಲಕ ವಾಯುಯಾನ ಸೇವೆ ಉತ್ತಮಗೊಳಿಸಲಾಗುತ್ತಿದೆ. ಆದರೆ ಅರಣ್ಯ ಇಲಾಖೆ ಸಮಸ್ಯೆ ಸೇರಿ ಇನ್ನಿತರ ಕಾರಣಗಳಿಂದ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಾಗದ ಜಿಲ್ಲೆಗಳಲ್ಲಿ ಏರ್ಸ್ಟ್ರಿಪ್, ಹೆಲಿಪೋರ್ಟ್ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ನಿಗಮವು ಚಿಕ್ಕಮಗಳೂರು, ಹಂಪಿ, ಮಡಿಕೇರಿಯಲ್ಲಿ ಏರ್ಸ್ಟ್ರಿಪ್-ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ 137 ಎಕರೆ, ಮಡಿಕೇರಿಯಲ್ಲಿ 7.27 ಎಕರೆ, ಹಂಪಿಯಲ್ಲಿ 10 ಎಕರೆ
ಆ ಪೈಕಿ ಚಿಕ್ಕಮಗಳೂರಿನಲ್ಲಿ ಗುರುತಿಸಲಾಗಿರುವ 137 ಎಕರೆಯಲ್ಲಿ ಏರ್ಸ್ಟ್ರಿಪ್ ಮತ್ತು ಹೆಲಿಪೋರ್ಟ್ ಎರಡನ್ನೂ ನಿರ್ಮಿಸಲಾಗುತ್ತದೆ. ಉಳಿದಂತೆ ಮಡಿಕೇರಿ ಮತ್ತು ಹಂಪಿಯ ಕಮಲಾನಗರದಲ್ಲಿ ಹೆಲಿಪೋರ್ಟ್ ನಿರ್ಮಿಸಲು ಯೋಜಿಸಲಾಗಿದೆ. ಮಡಿಕೇರಿಯಲ್ಲಿ 7.27 ಎಕರೆ ಮತ್ತು ಹಂಪಿಯಲ್ಲಿ 10 ಎಕರೆ ಭೂಮಿ ಮೀಸಲಿರಿಸಲಾಗಿದೆ.
ಸಣ್ಣ ವಿಮಾನ ಅಥವಾ ಹೆಲಿಕಾಪ್ಟರ್ ಬಳಕೆಗೆ ಅನುಕೂಲ
ಈ ಭೂಮಿಯಲ್ಲಿ ಯಾವ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಬಹುದು, ಯೋಜನೆಗೆ ಎಷ್ಟು ವೆಚ್ಚವಾಗಲಿದೆ ಎಂಬುದು ಸೇರಿದಂತೆ ವಿವರ ಯೋಜನಾ ವರದಿ ಸಿದ್ಧಪಡಿಸಲು ನಿಗಮ ಮುಂದಾಗಿದೆ. ಈ ಏರ್ಸ್ಟ್ರಿಪ್ ಮತ್ತು ಹೆಲಿಪೋರ್ಟ್ ನಿರ್ಮಾಣದಿಂದಾಗಿ ಸ್ಥಳೀಯ ವಾಣಿಜ್ಯ ಉದ್ಯಮ ಅಭಿವೃದ್ಧಿ, ತುರ್ತು ಪರಿಸ್ಥಿತಿಯಲ್ಲಿ ಸಣ್ಣ ವಿಮಾನ ಅಥವಾ ಹೆಲಿಕಾಪ್ಟರ್ ಬಳಸಲು ಅನುಕೂಲವಾಗಲಿದೆ.


