ಬೆಂಗಳೂರು[ಜ.08]: ಮರಳು ಪರ್ಮಿಟ್‌ಗೆ ಆಗ್ರಹಿಸಿ ನೂರಾರು ಬಿಜೆಪಿ ಕಾರ್ಯರ್ತರೊಂದಿಗೆ ‘ಅಕ್ರಮ ಕೂಟ’ ರಚಿಸಿಕೊಂಡು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಸಾರ್ವಜನಿಕ ಆಸ್ತಿಗೆ ನಷ್ಟಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಟಿ. ರವಿ ಅವರ 18 ಬೆಂಬಲಿಗರ ವಿರುದ್ಧ ಚಿಕ್ಕಮಗಳೂರು ಟೌನ್‌ ಠಾಣೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಪ್ರಕರಣದ ಸಂಬಂಧ 2014ರಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಹಾಗೂ ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ತಮ್ಮಯ್ಯ ಹಾಗೂ ಕನಕರಾಜ್‌ ಸೇರಿ 18 ಮಂದಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ಅವರಿದ್ದ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ನೇರ ಆರೋಪಗಳಿಲ್ಲ. ಅವರು ಕೃತ್ಯದಲ್ಲಿ ಭಾಗವಹಿಸಿದ್ದಾರೆ ಎಂಬುದನ್ನು ದೃಢಪಡಿಸುವ ಸಾಕ್ಷ್ಯಾಧಾರಗಳಿಲ್ಲ. ಇದೇ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧದ ವಿಚಾರಣೆ ಈಗಾಗಲೇ ರದ್ದಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲ ಎಂ.ಅರುಣ ಶ್ಯಾಮ ವಾದ ಮಂಡಿಸಿದ್ದರು. ಇದೇ ಆರೋಪಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಹಾಲಿ ಸಚಿವ ಸಿ.ಟಿ. ರವಿ ಮತ್ತು ವರಸಿದ್ಧಿ ವೇಣುಗೋಪಾಲ್‌ ಸೇರಿ ಇತರೆ 11 ಮಂದಿ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ 2019ರ ಸೆ.4ರಂದು ಹೈಕೋರ್ಟ್‌ ಆದೇಶಿಸಿತ್ತು.

ಡೀಸಿ ಕಚೇರಿಯಲ್ಲಿ ಪ್ರತಿಭಟನೆ:

2014ರ ಸೆ.27ರಂದು ಬೆಳಗ್ಗೆ ಸಿ.ಟಿ. ರವಿ ನೇತೃತ್ವದಲ್ಲಿ 100ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಯಾವುದೇ ಪೂರ್ವಾನುಮತಿ ಪಡೆಯದೇ ಅಕ್ರಮ ಕೂಟ ರಚಿಸಿಕೊಂಡು ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದರು. ಈ ವೇಳೆ ಮರಳು ಪರ್ಮಿಟ್‌ಗಾಗಿ ಆಗ್ರಹಿಸಿ ಘೋಷಣೆ ಕೂಗಿ, ಕಚೇರಿಗೆ ನುಗ್ಗಿ ಗಾಜುಗಳನ್ನು ಒಡೆದು ಹಾಕಿ ಸರ್ಕಾರಿ ಆಸ್ತಿಗೆ ನಷ್ಟಉಂಟುಮಾಡಿದ್ದರು. ಕರ್ತವ್ಯನಿರತ ಪಿಎಸ್‌ಐ ಕೆ.ಆರ್‌.ಸುನಿತಾ ಮೇಲೆ ಹಲ್ಲೆ ನಡೆಸಿದ್ದರು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಯಾಗಿದ್ದ ಭಾಗ್ಯ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು.

ಆ ದೂರು ಆಧರಿಸಿ ಪೊಲೀಸರು ಶಾಸಕ ಸಿ.ಟಿ. ರವಿ ಸೇರಿ 31 ಮಂದಿ ವಿರುದ್ಧ ಐಪಿಸಿ ಸೆಕ್ಷನ್‌ 143, 147, 332, 427, 149, ಸರ್ಕಾರಿ ಆಸ್ತಿ ಹಾನಿ ತಡೆ ಕಾಯ್ದೆ-1984ರ ಸೆಕ್ಷನ್‌ 31(ಒ) 103 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.