ಹಾವು ಹಿಡಿಯಲು ಹೋದ ಹುಡುಗನನ್ನು ಅದೇ ಹಾವು ಕಡಿದ ಘಟನೆ ಹೊಸಪೇಟೆ ನಗರದ ಮುದ್ಲಾಪುರ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ರಜಾಕ್ (17) ಮೃತಪಟ್ಟ ಹುಡುಗ. ಹಾವು ಕಚ್ಚಿರೋ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.
ವಿಜಯನಗರ (ನ.11): ಹಾವು ಹಿಡಿಯಲು ಹೋದ ಹುಡುಗನನ್ನು ಅದೇ ಹಾವು ಕಡಿದ ಘಟನೆ ಹೊಸಪೇಟೆ ನಗರದ ಮುದ್ಲಾಪುರ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ರಜಾಕ್ (17) ಮೃತಪಟ್ಟ ಹುಡುಗ. ಹಾವು ಕಚ್ಚಿರೋ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮನೆಯೊಂದಕ್ಕೆ ಬಂದಿದ್ದ ನಾಗರಹಾವನ್ನು ಅಬ್ದುಲ್ ರಜಾಕ್ ಹಿಡಿಯಲು ಯತ್ನಿಸಿದಾಗ ಕೈಗೆ ಹಾವು ಕಚ್ಚಿ ಮೃತಪಟ್ಟಿದ್ದಾನೆ. ಹಾವು ಹಿಡಿದರೆ 500 ಸಿಗುತ್ತದೆ ಎಂಬ ಆಸೆಗೆ ಹುಡುಗ ಹಾವು ಹಿಡಿಯಲು ಹೋಗಿದ್ದ ಎನ್ನಲಾಗಿದೆ. ಹಾವಿನ ಬಾಲವನ್ನು ಹಿಡಿದು ಮುಂದೆ ಹೆಡೆಯನ್ನು ಹಿಡಿಯುವ ವೇಳೆ ಹಾವು ಕೈಗೆ ಕಚ್ಚಿದೆ.
ಹಾವು ಕಚ್ಚಿದ ಬಳಿಕ ಎರಡು ತಾಸು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾದಾಗ, ಕೂಡಲೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ, ನಂತರ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ನವೆಂಬರ್ 4ರಂದು ಈ ಘಟನೆ ನಡೆದಿತ್ತು. ಇದೀಗ ಬಾಲಕ ಸಾವನ್ನಪ್ಪಿದ್ದು, ಈ ಕುರಿತು ಚಿತ್ತವಾಡ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇವಂತಿ ಹೂವು ಕೀಳುವಾಗ ಹಾವು ಕಡಿದು ಮಹಿಳೆ ಸಾವು
ತೋಟದಲ್ಲಿದ್ದ ಸೇವಂತಿಗೆ ಹೂವು ಕೀಳಲು ತೆರಳಿದ್ದಾಗ ವಿಷಪೂರಿತ ಹಾವು ಕಡಿದು ರೈತ ಮಹಿಳೆ ಸಾವಿಗೀಡಾಗಿರುವ ಘಟನೆ ಮರಿಯನ ಹೊಸೂರು ಗ್ರಾಮದಲ್ಲಿ ನಡೆದಿದೆ. ರೈತ ಕೆಂಪೇಗೌಡರ ಪತ್ನಿ ಗೌರಮ್ಮ(45) ಮೃತ ಮಹಿಳೆ. ತಮ್ಮ ತೋಟದಲ್ಲಿ ಸೇವಂತಿಗೆ ಹೂವು ಬೆಳೆದಿದ್ದರು. ಆಯುಧಪೂಜೆ ಹಬ್ಬಕ್ಕಾಗಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಮಂಗಳವಾರ ತಮ್ಮ ತೋಟದಲ್ಲಿ ಸೇವಂತಿಗೆ ಹೂವು ಕೀಳಲು ಬೆಳಗ್ಗೆ ತೆರಳಿದ್ದರು. ಹೂವು ಕೀಳುವಾಗ ಮುಖದ ಮೂಗಿನ ಭಾಗಕ್ಕೆ ವಿಷಪೂರಿತ ಹಾವು ಕಡಿದಿದೆ.
ತೀವ್ರ ಅಸ್ವಸ್ಥಳಾಗಿರುವುದನ್ನು ಕಂಡು ಈಕೆಯನ್ನು ಸಂಬಂಧಿಕರು ನೋಡಿದ್ದಾರೆ. ತುರ್ತು ಚಿಕಿತ್ಸೆಗಾಗಿ ಕಿಕ್ಕೇರಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದೆ ತುರ್ತು ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಮೃತರಾದರು. ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಮೃತ ಮಹಿಳೆಗೆ ಪತಿ, ನಾಲ್ವರು ಪುತ್ರಿಯರು ಇದ್ದಾರೆ.
