ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ರೈತರು ಅಘೋಷಿತ ಲೋಡ್ ಶೆಡ್ಡಿಂಗ್‌ನಿಂದ ತತ್ತರಿಸಿದ್ದಾರೆ. ವಿದ್ಯುತ್ ಅಭಾವದಿಂದ ಬೆಳೆಗಳು ಒಣಗುತ್ತಿದ್ದು, ಹೈನುಗಾರಿಕೆಗೂ ಹೊಡೆತ ಬಿದ್ದಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತ ರೈತರು ಮೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಏ.28): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರಿಗೆ ಈಗ ವಿದ್ಯುತ್ ಅಭಾವವೇ ಶಾಪವಾಗಿ ಪರಿಣಮಿಸಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡಬೇಕಾದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರೇ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ಸಹ, ಇಲ್ಲಿನ ರೈತರು ಮಾತ್ರ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಅಘೋಷಿತ ಲೋಡ್ ಶೆಡ್ಡಿಂಗ್‌ನಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರೈತರ ಜೀವನೋಪಾಯಕ್ಕೆ ಭಾರಿ ಹೊಡೆತ ಬಿದ್ದಿದೆ.

ಒಣಗುತ್ತಿದೆ ಬೆಳೆ, ಕೈಮೀರುತ್ತಿದೆ ಬಂಡವಾಳ:

ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದರೂ, ಪೂರಕವಾಗಿ ಪಂಪ್‌ಸೆಟ್‌ಗಳ ಮೂಲಕ ನೀರಾವರಿ ಅವಲಂಬಿಸಿದ್ದಾರೆ. ಆದರೆ, ನಿರಂತರ ವಿದ್ಯುತ್ ಕಡಿತದಿಂದಾಗಿ ತೋಟಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಕಣ್ಣೆದುರೇ ಹಚ್ಚ ಹಸಿರಾಗಿ ಬೆಳೆಯಬೇಕಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಹೂಡಿಕೆ ಮಾಡಿದ ಬಂಡವಾಳವೂ ಮರಳಿ ಬರುವುದಿಲ್ಲವೇನೋ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಹೈನುಗಾರಿಕೆ ಹಾಗೂ ದೈನಂದಿನ ಬದುಕಿಗೆ ಕಂಟಕ:

ವಿದ್ಯುತ್ ಕೊರತೆ ಕೇವಲ ಕೃಷಿಗೆ ಮಾತ್ರವಲ್ಲದೆ ಹೈನುಗಾರಿಕೆಗೂ ಮಾರಕವಾಗಿದೆ. ಪಂಪ್‌ಗಳು ಕೆಲಸ ಮಾಡದ ಕಾರಣ ದನಕರುಗಳಿಗೆ ಕುಡಿಯುವ ನೀರು ಒದಗಿಸುವುದು ದೊಡ್ಡ ಸವಾಲಾಗಿದೆ. ಇದು ಹಾಲಿನ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರಿದೆ. ಇನ್ನು ತೋಟದ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಇಡೀ ರಾತ್ರಿ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಮಕ್ಕಳ ಶಿಕ್ಷಣಕ್ಕೂ ಈ ವಿದ್ಯುತ್ ವ್ಯತ್ಯಯ ಅಡ್ಡಿಯಾಗುತ್ತಿದ್ದು, ಸಾರ್ವಜನಿಕರ ದೈನಂದಿನ ಬದುಕು ನರಕಸದೃಶವಾಗಿದೆ.

ಮೆಸ್ಕಾಂ ವಿರುದ್ಧ ರೈತರ ರೊಚ್ಚಿಗೆದ್ದ ಪ್ರತಿಭಟನೆ:

ಸಮಸ್ಯೆಗಳ ಬಗ್ಗೆ ಮೆಸ್ಕಾಂ (MESCOM) ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ರೈತರು ಇಂದು ನಿಡಘಟ್ಟ ವಿದ್ಯುತ್ ಉಪಕೇಂದ್ರದ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಮೆಸ್ಕಾಂ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಕೂಡಲೇ ಅನಿಯಮಿತ ವಿದ್ಯುತ್ ಕಡಿತ ನಿಲ್ಲಿಸಬೇಕು ಮತ್ತು ಪಂಪ್‌ಸೆಟ್‌ಗಳಿಗೆ ನಿಗದಿತ ವೇಳಾಪಟ್ಟಿಯಂತೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಇಂಧನ ಸಚಿವರ ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ಇರುವುದು ವಿಷಾದನೀಯ ಎಂದು ಕಿಡಿಕಾರಿದ ರೈತರು, ತಕ್ಷಣವೇ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ.