ಮೆಸ್ಕಾಂ ನಿರ್ಲಕ್ಷ್ಯ : ವಿದ್ಯುತ್ ಇಲ್ಲ, ನೀರೂ ಇಲ್ಲ
ಮೆಸ್ಕಾಂ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ಜನತೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಹಾಗೆಯೇ ವಿದ್ಯುತ್ ಬಿಲ್ ಬೇಕಾಬಿಟ್ಟಿಯಾಗಿ ಬರುತ್ತಿದ್ದು, 200 ರೂಪಾಯಿ ಬರುವಲ್ಲಿ 2000ದಷ್ಟು ಬರುತ್ತಿದೆ. ಈ ಸಂಬಂಧ ಸೂಕ್ತ ಕ್ರಮ ಕೖಗೊಳ್ಳಲು ಜನ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು( ಜು.13): ಮೆಸ್ಕಾಂ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ಜನತೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸೂಕ್ತ ಸಮಯದಲ್ಲಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ.
ಕರೆಂಟ್ ಇಲ್ಲದೆ ಕೆಲವೆಡೆ ಫ್ರಿಡ್ಜ್‌ಗಳು ಕೆಟ್ಟು ಹೋಗುತ್ತಿದೆ. ಕೆಲವೊಮ್ಮೆ ವಿದ್ಯುತ್ ವೋಲ್ಟೇಜ್ ಏರುಪೇರುಗಳಿಂದಾಗಿ ಮನೆಯಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟುಹೋಗುತ್ತಿವೆ. ಈ ಬಗ್ಗೆ ಮೆಸ್ಕಾಂಗೆ ಕರೆ ಮಾಡಿದರೆ ಕರೆಗಳನ್ನೇ ಸ್ವೀಕರಿಸದೇ ನಿರ್ಲಕ್ಷಿಸುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಕರೆಗಳನ್ನು ಸ್ವೀಕರಿಸಿದರೂ ಮರ ಬಿದ್ದಿದೆ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಜನ ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟದ ಎಚ್ಚರಿಕೆ:
ಕೆಸವೆ ಗ್ರಾ.ಪಂ.ಯ ಸಿದ್ಧರಮಠ, ಗಾಡಿಕೆರೆ, ಕೆಸವೆ ಭಾಗಗಳಲ್ಲಿ, ಹಿರೇಕೊಡಿಗೆ ಪಂಚಾಯಿತಿಯ ಸೂರ್ಯ ದೇವಸ್ಥಾನ, ಹೊಕ್ಕಳಿಕೆ, ಕವಡೆಕಟ್ಟೆ, ಹೊಲಗೋಡು, ಹಾತಿಗೆ ಗ್ರಾಮಗಳಲ್ಲಿ ಕಳೆದ 5 ದಿನಗಳಿಂದಲೂ ವಿದ್ಯುತ್ ಇಲ್ಲದೇ ತೊಂದರೆ ಉಂಟಾಗಿದೆ. ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಪಟ್ಟವರು, ಶಾಸಕರು, ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಮೆಸ್ಕಾಂ ನಿರ್ಲಕ್ಷ್ಯ ವಿರುದ್ಧ ಗ್ರಾಮಸ್ಥರು ಬೀದಿಗಿಳಿದು ಹೋರಾಟ ರೂಪಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಲ್‌ನಲ್ಲಿ ಹತ್ತು ಪಟ್ಟು ಹೆಚ್ಚು ಮೊತ್ತ
ಒಂದಕ್ಕೆ ಹತ್ತು ಪಟ್ಟು ಬಿಲ್ ಬರುತ್ತಿರುವ ಬಗ್ಗೆ ವಿದ್ಯುತ್ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಾಮಾನ್ಯವಾಗಿ ತಿಂಗಳಿಗೆ 200- 300ರಷ್ಟು ವಿದ್ಯುತ್ ಬಿಲ್ ಬರುತ್ತಿತ್ತು. ಈಗ ಹೊಸ ಡಿಜಿಟಲ್ ಮೀಟರ್ ಅಳವಡಿಕೆ ನಂತರ 2500ದಿಂದ 6000 ಗಿಂತಲೂ ಹೆಚ್ಚಿನ ಬಿಲ್ ಬರತೊಡಗಿದೆ.ಈ ಸಂಬಂಧ ಸೂಕ್ತ ಕ್ರಮ ಕೖಗೊಳ್ಳುವಂತೆ ಹಿರಿಕೊಡಿಗೆ ಗ್ರಾ.ಪಂ.ಯ ಭಾಸ್ಕರ್ ಶೆಟ್ಟಿ, ಸಿದ್ಧರಮಠದ ಯೋಗೀಶ್, ಅದ್ದಡದ ಎಸ್.ಎಸ್. ಜಯೇಂದ್ರ, ವಿದ್ಯಾನಗರದ ರಾಘವೇಂದ್ರ ಶೆಟ್ಟಿ ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.