ಮೂಡಿಗೆರೆಯಿಂದ ತತ್ಕೋಳ ಅರಣ್ಯದತ್ತ ಸಾಗುತ್ತಿದ್ದ 22 ಕಾಡಾನೆಗಳ ಹಿಂಡು ದಿಢೀರನೆ ಮತ್ತೆ ಬೇಲೂರಿನತ್ತ ಮುಖಮಾಡಿವೆ. ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ಅರಣ್ಯ ಇಲಾಖೆಯ ಶ್ರಮ ವ್ಯರ್ಥವಾಗಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಚಿಕ್ಕಮಗಳೂರು (ನ.25): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆಯುತ್ತಿರುವ 'ಆಪರೇಷನ್ ಗಜ' ಕಾರ್ಯಾಚರಣೆ ನಡುವೆಯೇ ಕಾಡಾನೆಗಳ ಹಿಂಡು ತತ್ಕೋಳ ಅರಣ್ಯದ ಕಡೆ ಮುಖ ಮಾಡದೆ, ಬಂದ ದಾರಿಯಲ್ಲೇ ವಾಪಸ್ ತೆರಳಿ ಮತ್ತೆ ಬೇಲೂರಿನತ್ತ ಮುಖ ಮಾಡಿವೆ. ಇದರಿಂದ ಬೇಲೂರಿನಲ್ಲಿ ಮತ್ತೆ ಆತಂಕದ ವಾತಾವರಣ ಆರಂಭವಾಗಿದೆ.
ಬೇಲೂರಿನತ್ತ 22 ಕಾಡಾನೆಗಳ ಪ್ರಯಾಣ:
ನಿನ್ನೆ ತತ್ಕೋಳ ಅರಣ್ಯಕ್ಕೆ ಕೇವಲ 3.5 ಕಿಲೋಮೀಟರ್ ದೂರದಲ್ಲಿದ್ದ 22 ಕಾಡಾನೆಗಳ ಹಿಂಡು, ನಿನ್ನೆ ಇದ್ದ ಕೆಲ್ಲೂರು ಗ್ರಾಮದಿಂದ ವಾಪಸ್ ತೆರಳಿವೆ. ಇದೀಗ ತತ್ಕೋಳ ಅರಣ್ಯದಿಂದ ಸುಮಾರು 10 ಕಿಲೋಮೀಟರ್ ದೂರಕ್ಕೆ ಸಾಗಿವೆ. ಇನ್ನೊಂದೆರಡು ದಿನಗಳಲ್ಲಿ ಆನೆಗಳ ಹಿಂಡು ಎಲ್ಲಿ ಮಾನವರ ಮೇಲೆ ದಾಳಿ ಮಾಡಿದ್ದವೋ, ಅದೇ ಸ್ಥಳಕ್ಕೆ ವಾಪಸ್ ಬಂದು ಸೇರಲಿವೆ..
ಸದ್ಯ ಎಲ್ಲೆಲ್ಲಿ ಇವೆ ಕಾಡಾನೆಗಳು?
ಪ್ರಸ್ತುತ ಕಾಡಾನೆಗಳ ಹಿಂಡು ಕಾರ್ ಬೈಲು ಗ್ರಾಮ ಹಾಗೂ ದುಂಡಿಗ ಗ್ರಾಮದ ಭಾಗದಲ್ಲಿ ಕಾಣಿಸಿಕೊಂಡಿವೆ. ಬೀಟಮ್ಮ, ಭುವನೇಶ್ವರಿ ಮತ್ತು ಓಲ್ಡ್ ಬೆಲ್ಟ್ ಕಾಡಾನೆಗಳ ಹಿಂಡು ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
10 ಆನೆಗಳ ಸೆರೆಗೆ ಆದೇಶ
ಈಗಾಗಲೇ ಹಾಸನ ಜಿಲ್ಲೆಯ ಬೇಲೂರಿನ ಸುತ್ತಮುತ್ತಲೂ ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಸೇರಿ ಮೂವರನ್ನು ಆನೆಗಳು ತುಳಿದು ಸಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಬೇಲೂರಿನಲ್ಲಿ ಭಾರೀ ಹೋರಾಟ ಶುರುವಾಗಿದ್ದು, ಆನೆ ತುಳಿತಕ್ಕೊಳಗಾಗಿ ಮೃತಪಟ್ಟವರ ಶವವನ್ನು ಸರ್ಕಾರಿ ಕಚೇರಿ ಮುಂದಿಟ್ಟು ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನೆ ನಡೆಯುತ್ತಿರುವಾಗಲೇ ಮತ್ತೊಬ್ಬ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, 10 ಗಂಡು ಆನೆಗಳನ್ನು ಸೆರೆ ಹಿಡಿಯುವುದಕ್ಕೆ ಆದೇಶ ಹೊರಡಿಸಿತು.
ಶಾಸಕಿ ರಾಜೀನಾಮೆ ಪ್ರಹಸನ
ಜೊತೆಗೆ, ಆನೆಗಳನ್ನು ಬೇಲೂರು ಭಾಗದಿಂದ ಕಾಡಿನೊಳಗೆ ಓಡಿಸಲು 'ಗಜ ಕಾರ್ಯಾಚರಣೆ' ಕೈಗೆತ್ತಿಕೊಂಡಿತು. ಅಂದರೆ ಕಾಡಾನೆಗಳನ್ನು ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಸೇರಿದಂತೆ ವಿವಿಧಡೆ ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಹಾಸನದಲ್ಲಿದ್ದ ಪುಂಡಾನೆಗಳನ್ನು ಮೂಡಿಗೆರೆ ಕಾಡಿನತ್ತ ಓಡಿಸಿದರೆ ಇಲ್ಲಿನ ಜನರ ಜೀವಕ್ಕೆ ಬೆಲೆ ಇಲ್ಲವಾ? ನಮ್ಮ ಜನರ ಪ್ರಾಣಕ್ಕೆ ಕುತ್ತು ಬರುವುದನ್ನು ನೋಡಿ ಸಹಿಸಿಕೊಳ್ಳುವುದಿಲ್ಲ ಎಂದು ಮೂಡಿಗೆರೆ ಶಾಸಕಿ ರಾಜೀನಾಮೆ ಕೊಡಲು ಮುಂದಾದರು. ಇದರ ಬೆನ್ನಲ್ಲೇ ಸರ್ಕಾರ ಆನೆಗಳನ್ನು ಓಡಿಸುವ ಗಜ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.
ಕಾಡಾನೆಗಳನ್ನು ಓಡಿಸುವುದನ್ನು ನಿಲ್ಲಿಸಿದ ಅರಣ್ಯ ಇಲಾಖೆ ನೈಸರ್ಗಿಕವಾಗಿ ಯಾವ ದಿಕ್ಕಿಗೆ ಹೋಗುತ್ತವೆಯೋ ಅವುಗಳಿಗೆ ಬಿಟ್ಟುಬಿಡೋಣ ಎಂದು ತೀರ್ಮಾನಿಸಿದ್ದರು. ಇದೀಗ ಎರಡು ದಿನಗಳ ಕಾಲ ಕಾಡಿನಲ್ಲಿ ಓಡಾಡಿದ ಆನೆಗಳ ಹಿಂಡು ಇದೀಗ ಪುನಃ ಬೇಲೂರು ಕಡೆಗೆ ಪ್ರಯಾಣವನ್ನು ಆರಂಭಿಸಿವೆ. ಅರಣ್ಯ ಇಲಾಖೆಯವರು ಈವರೆಗೆ ಮಾಡಿದ ಕಾರ್ಯವು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
















