ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಾಫಿ ಎಸ್ಟೇಟ್‌ನಲ್ಲಿ ನಾಪತ್ತೆಯಾಗಿದ್ದ ಒಂದೂವರೆ ವರ್ಷದ ಮಗು, 12 ಗಂಟೆಗಳ ತೀವ್ರ ಹುಡುಕಾಟದ ನಂತರ ಪತ್ತೆಯಾಗಿದೆ. ಇಡೀ ರಾತ್ರಿ ಮಳೆ ಮತ್ತು ಕಾಡು ಪ್ರಾಣಿಗಳ ನಡುವೆ ಹಳ್ಳವೊಂದರಲ್ಲಿ ಸಿಲುಕಿದ್ದ ಮಗು ಪವಾಡಸದೃಶವಾಗಿ ಬದುಕುಳಿದಿದೆ.

ಚಿಕ್ಕಮಗಳೂರು (ಮೇ 08): ಮೂಡಿಗೆರೆ ತಾಲೂಕಿನ ಕೆಳಗೂರು ಕಾಫಿ ಎಸ್ಟೇಟ್‌ನಲ್ಲಿ ನಾಪತ್ತೆಯಾಗಿದ್ದ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಕೊನೆಗೂ ಪತ್ತೆಯಾಗಿದೆ. ಇಡೀ ರಾತ್ರಿ ಸುರಿಯುವ ಮಳೆಯ ನಡುವೆ, ದಟ್ಟವಾದ ಕಾಫಿ ತೋಟದ ಹಳ್ಳವೊಂದರಲ್ಲಿ ಹಸಿವು ಮತ್ತು ಚಳಿಯಿಂದ ನಡುಗುತ್ತಿದ್ದ ಮಗುವನ್ನು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಟ್ಟು ರಕ್ಷಿಸಿದ್ದಾರೆ.

ಘಟನೆಯ ಹಿನ್ನೆಲೆ:

ಮಧ್ಯಪ್ರದೇಶ ಮೂಲದ ಗೋನು ಮತ್ತು ಸೋನು ದಂಪತಿ ಕಳೆದೊಂದು ವಾರದ ಹಿಂದಷ್ಟೇ ಕೆಲಸ ಅರಸಿ ಕೆಳಗೂರು ಎಸ್ಟೇಟ್‌ಗೆ ಬಂದಿದ್ದರು. ಕೂಲಿ ಕೆಲಸಕ್ಕೆ ಹೋಗುವಾಗ ತಮ್ಮ ಐವರು ಮಕ್ಕಳನ್ನು ನೋಡಿಕೊಳ್ಳಲು ಓರ್ವ ಮಹಿಳೆಯನ್ನು ನೇಮಿಸಿದ್ದರು. ಆದರೆ, ಶುಕ್ರವಾರ ಮಧ್ಯಾಹ್ನ ಮಗು ಅಳುತ್ತಿದೆ ಎಂಬ ಕಾರಣಕ್ಕೆ ಆ ಮಹಿಳೆ, 8 ವರ್ಷದ ಬಾಲಕಿಯ ಜೊತೆ ಮಗುವನ್ನು ಎಸ್ಟೇಟ್ ಬಳಿ ಕಳುಹಿಸಿದ್ದರು. ಕಾಫಿ ತೋಟದ ನಡುವೆ ಅಡ್ಡಾಡಿ ಸುಸ್ತಾಗಿದ್ದ ಮಕ್ಕಳು ಮಧ್ಯಾಹ್ನ ಊಟ ಮಾಡಿ ಅಲ್ಲೇ ಮಲಗಿದ್ದಾರೆ. ಈ ವೇಳೆ 8 ವರ್ಷದ ಬಾಲಕಿ, ಒಂದೂವರೆ ವರ್ಷದ ಶಿವಂ ಎಂಬ ಮಗುವನ್ನು ರಸ್ತೆಯಲ್ಲೇ ಬಿಟ್ಟು ಮನೆಗೆ ಮರಳಿದ್ದಾಳೆ.

12 ಗಂಟೆಗಳ ಕಾಲ ನಡೆದ ಹುಡುಕಾಟ:

ಸಂಜೆ ಪೋಷಕರು ಕೆಲಸ ಮುಗಿಸಿ ಮನೆಗೆ ಬಂದಾಗ ಮಗು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಬಾಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು, ಶ್ವಾನ ದಳ ಹಾಗೂ ಸ್ಥಳೀಯರು ಕಾರ್ಯಾಚರಣೆ ಆರಂಭಿಸಿದರು. ಕಾಫಿ ತೋಟದ ಅಂಚಿನಲ್ಲಿ ರಾತ್ರಿಯಿಡೀ ಹುಡುಕಾಟ ನಡೆಸಲಾಯಿತಾದರೂ ಕಾಡು ಪ್ರಾಣಿಗಳ ಭಯ ಮತ್ತು ಸುರಿಯುವ ಮಳೆಯಿಂದಾಗಿ ಹುಡುಕಾಟ ಕಷ್ಟವಾಗಿತ್ತು. ಇಡೀ ರಾತ್ರಿ ಪೋಷಕರು ಕಣ್ಣೀರು ಹಾಕುತ್ತಾ ಮಗುವಿಗಾಗಿ ಕಾದು ಕುಳಿತಿದ್ದರು.

ಪವಾಡದಂತೆ ಬದುಕುಳಿದ ಮಗು:

ಇಂದು ಮುಂಜಾನೆ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಹಳ್ಳದ ಬಳಿ ಹುಡುಕಾಟ ನಡೆಸಿದಾಗ, ಮಗು ಶಿವಂ ಅಲ್ಲಿ ನಡುಗುತ್ತಾ ಕುಳಿತಿರುವುದು ಕಂಡುಬಂದಿದೆ. ರಾತ್ರಿಯಿಡೀ ಸುರಿದ ಮಳೆ ಹಾಗೂ ಕತ್ತಲೆಯಲ್ಲಿ ಕಾಡು ಪ್ರಾಣಿಗಳ ನಡುವೆಯೂ ಮಗು ಪ್ರಾಣಾಪಾಯದಿಂದ ಪಾರಾಗಿರುವುದು ಒಂದು ಪವಾಡವೇ ಸರಿ. ಸದ್ಯ ಮಗುವನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಮಗು ಪತ್ತೆಯಾದ ಸುದ್ದಿ ಕೇಳಿ ಪೋಷಕರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.